ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ ಪುನರಾರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡಕ್ಕೆ ಆಘಾತ ಎದುರಾಗಿದೆ. ಆರ್ಸಿಬಿ ತಂಡದ ಪ್ರಮುಖ ಆಟಗಾರರು ಟೂರ್ನಿಯ ಉಳಿದ ನಿರ್ಣಾಯಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.
ಈ ಬಾರಿ ಭರ್ಜರಿ ಪ್ರದರ್ಶನ ನೀಡಿರುವ ಆರ್ಸಿಬಿ, ಆಡಿರುವ 11 ಪಂದ್ಯಗಳಲ್ಲಿ ತಂಡವು 8 ಜಯ ಸಾಧಿಸಿದೆ. ಇದೀಗ ಇನ್ನುಳಿದ ಮೂರು ಪಂದ್ಯಗಳಲ್ಲಿ ಒಂದು ಗೆಲುವು ದಾಖಲಿಸಿದರೆ ಪ್ಲೇಆಫ್ ಹಂತಕ್ಕೇರಲಿದೆ. ಆದರೆ ಈ ನಿರ್ಣಾಯಕ ಪಂದ್ಯಗಳಿಗೆ ತಂಡದ ಪ್ರಮುಖ ಐವರು ಆಟಗಾರು ಅಲಭ್ಯರಿರಲಿದ್ದಾರೆ.
ಆರ್ಸಿಬಿಯ ಉಳಿದ ಮ್ಯಾಚ್ಗಳಿಗೆ ಜೋಶ್ ಹೇಝಲ್ವುಟ್ ಅಲಭ್ಯ..!
ಜೋಶ್ ಹೇಝಲ್ವುಡ್ ಅವರು ಭುಜದ ನೋವಿನಿಂದ ಬಳಲುತ್ತಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅನ್ನು ಗಮನದಲ್ಲಿರಿಸಿ ಅವರು ಮನೆಯಲ್ಲೇ ಉಳಿಯುವ ಸಾಧ್ಯತೆಯಿದೆ. ಇದರೊಂದಿಗೆ ಜೋಶ್ ಹೇಝಲ್ವುಡ್ ಆರ್ಸಿಬಿ ತಂಡದ ಉಳಿದ ಪಂದ್ಯಗಳಿಗೆ ಅಲಭ್ಯರಾಗುವುದು ಬಹುತೇಕ ಖಚಿತವಾದಂತಾಗಿದೆ. ಇದಕ್ಕೂ ಮುನ್ನ ಸಿಎಸ್ಕೆ ವಿರುದ್ಧದ ಪ೦ದ್ಯದಲ್ಲಿ ಭುಜದ ನೋವಿನ ಕಾರಣ ಅವರು ಕಣಕ್ಕಿಳಿದಿರಲಿಲ್ಲ. ಅವರ ಬದಲಿಗೆ ಲುಂಗಿ ಎನ್ಗಿಡಿ ಆಡಿದ್ದರು. ಇದೀಗ ಹೇಝಲ್ವುಡ್ ಅಲಭ್ಯರಾದರೆ, ಅವರ ಬದಲಿಗೆ ಲುಂಗಿ ಎನ್ಗಿಡಿ ಅಥವಾ ನುವಾನ್ ತುಷಾರ ಉಳಿದ ಪಂದ್ಯಗಳಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ನಿರ್ಣಾಯಕ ಪಂದ್ಯಗಳಿಂದ ಜೇಕಬ್ ಬೆಥೆಲ್ ಔಟ್..!
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಆರ್ಸಿಬಿಯ ಆರಂಭಿಕ ಆಟಗಾರ ಜೇಕಬ್ ಬೆಥೆಲ್ ಅವರನ್ನು ಇಂಗ್ಲೆಂಡ್ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಮೇ 26 ರೊಳಗೆ ಅವರು ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳಬೇಕಿದೆ. ಹೀಗಾಗಿ ಬೆಥೆಲ್ ಕೆಕೆಆರ್ ಹಾಗೂ ಎಸ್ಆರ್ಹೆಚ್ ವಿರುದ್ಧದ ಪಂದ್ಯಗಳ ಬಳಿಕ ತವರಿಗೆ ಮರಳಲಿದ್ದಾರೆ. ಅಲ್ಲದೆ ಎಲ್ಎಸ್ಜಿ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಜೊತೆಗೆ ಪ್ಲೇಆಫ್ ಸುತ್ತಿನಲ್ಲೂ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ.
ಗಾಯಗೊಂಡು ತಂಡದಿಂದ ಹೊರಗುಳಿದ ದೇವದತ್ ಪಡಿಕ್ಕಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಗಾಯಗೊಂಡಿದ್ದು, ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ. ಅಲ್ಲದೆ ಅವರ ಬದಲಿಗೆ ಇದೀಗ ಆರ್ಸಿಬಿ ಕರ್ನಾಟಕದ ಬಲಗೈ ಬ್ಯಾಟರ್ ಮಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಿನ್ನೆಲೆ ತವರಿಗೆ ಮರಳಲಿದ್ದಾರೆ ಲುಂಗಿ ಎನ್ಗಿಡಿ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ತಂಡದ ಭಾಗವಾಗಿರುವ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್ಗಿಡಿ ಕೂಡ ಮೇ 25 ರಂದು ತವರಿಗೆ ಮರಳಲಿದ್ದಾರೆ. ಹೀಗಾಗಿ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಿದರೆ ಲುಂಗಿ ಎನ್ಗಿಡಿ ಕೂಡ ಕಾಣಿಸಿಕೊಳ್ಳುವುದಿಲ್ಲ.
ಪ್ಲೇಅಫ್ ಪಂದ್ಯಕ್ಕೂ ಮುನ್ನವೇ ಆರ್ಸಿಬಿ ತೊರೆಯಲಿದ್ದಾರೆ ರೊಮಾರಿಯೊ ಶೆಫರ್ಡ್
ಮತ್ತೊಂದೆಡೆ ರೊಮಾರಿಯೊ ಶೆಫರ್ಡ್ ವೆಸ್ಟ್ ಇಂಡೀಸ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಮೇ 29 ರಿಂದ ಶುರುವಾಗಲಿದೆ. ಹೀಗಾಗಿ ರೊಮಾರಿಯೊ ಶೆಫರ್ಡ್ ಕೂಡ ಪ್ಲೇಅಫ್ ಪಂದ್ಯಕ್ಕೂ ಮುನ್ನವೇ ಆರ್ಸಿಬಿ ತಂಡವನ್ನು ತೊರೆಯಲಿದ್ದಾರೆ ಎನ್ನಲಾಗಿದೆ.
ಇನ್ನು ಆರ್ಸಿಬಿಯ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಫಾರ್ಮ್ನಲ್ಲಿಲ್ಲ. ಅಲ್ಲದೆ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಂದು ವೇಳೆ ಫಿಲ್ ಸಾಲ್ಟ್ ಸಂಪೂರ್ಣ ಫಿಟ್ನೆಸ್ನೊಂದಿಗೆ ಮರಳಿದರೆ ಮಾತ್ರ ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ಒಟ್ಟಿನಲ್ಲಿ ಪ್ಲೇಆಫ್ ಸುತ್ತಿಗೆ ಪ್ರವೇಶಿಸುವ ಹಂತದಲ್ಲಿರುವ ಆರ್ಸಿಬಿ ತಂಡಕ್ಕೆ ಇದೀಗ ಪ್ರಮುಖ ಆಟಗಾರರ ಅಲಭ್ಯತೆ ದೊಡ್ಡ ಹೊಡೆತ ನೀಡಲಿದೆ. ಏಕೆಂದರೆ ಪ್ಲೇಆಫ್ ಪಂದ್ಯಗಳು ಮೇ 29 ರಿಂದ ಶುರುವಾಗಲಿದ್ದು, ಈ ಪಂದ್ಯಗಳಿಗೆ ಆರ್ಸಿಬಿ ತಂಡದ ಐವರು ಆಟಗಾರರು ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ. ಈ ಐವರ ಅನುಪಸ್ಥಿತಿ ನಡುವೆಯೂ ಉತ್ತಮ ಪ್ರದರ್ಶನ ನೀಡಿ ಈ ಬಾರಿ ಆರ್ಸಿಬಿ ಕಪ್ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ.