ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದ ಘಟನೆಯ ಮೇಲೆ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸಂತ್ರಸ್ತೆ ಲಕ್ಕವ್ವ ಬಾಯಿ ನೇತೃತ್ವದಲ್ಲಿ ಸಮುದಾಯದವರು ಜಿಲ್ಲಾಧಿಕಾರಿ ಡಾ ಕೆ.ವಿದ್ಯಾಕುಮಾರಿ ಅವರಿಗೆ ಸೋಮವಾರ (ಮಾ.24) ಮನವಿ ಸಲ್ಲಿಸಿದರು.
ಹಲವು ವರ್ಷಗಳಿಂದ ವಿವಿಧ ಜಿಲ್ಲೆಗಳಿಂದ ಉದ್ಯೋಗ ಅರಸಿಕೊಂಡು ಉಡುಪಿಗೆ ಬಂದು ಮಲ್ಪೆ ಮೀನುಗಾರರ ಸಂಘದ ಸಹಕಾರದಿಂದ ಮಲ್ಪೆ ಬಂದರಿನಲ್ಲಿ ಕೆಲಸ ಮಾಡಿಕೊಂಡಿದ್ದೇವೆ. ಇತ್ತೀಚೆಗೆ ಆಕಸ್ಮಿಕವಾಗಿ ನಡೆದ ಘಟನೆಯ ಅನಂತರ ನಮ್ಮ ಸಮುದಾಯದ ಪ್ರಮುಖರು ಹಾಗೂ ಮಲ್ಪೆ ಮೀನುಗಾರರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಈ ಸಮಸ್ಯೆಯನ್ನು ಮಲ್ಪೆ ಪೊಲೀಸ್ ಠಾಣೆಯಲ್ಲಿ ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಳ್ಳಲಾಗಿದೆ. ಆದರೂ ಮುಗ್ದ ಮೀನುಗಾರರ ಮೇಲೆ ಕೇಸುಗಳನ್ನು ಹಾಕಿ ಬಂಧಿಸಿರುವುದು ಸರಿಯಲ್ಲ. ಮೀನುಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆದು ಸಾವಿರಾರು ಮಂದಿ ಉದ್ಯೋಗ ಅರಸಿ ಬಂದ ನಮ್ಮಂತಹ ಬಡ ಕಾರ್ಮಿಕರಿಗೆ ಸೌಹಾರ್ದಯುತ ರೀತಿಯಲ್ಲಿ ಕೆಲಸ ಮಾಡಿ ಉತ್ತಮ ಜೀವನ ನಡೆಸಲು ಅವಕಾಶ ನೀಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿಯ ಪ್ರತಿಯನ್ನು ಶಾಸಕ ಯಶ್‌ಪಾಲ್ ಸುವರ್ಣ ಅವರಿಗೆ ಈ ವೇಳೆ ನೀಡಲಾಯಿತು. ಪ್ರಮುಖರಾದ ಮಂಜುನಾಥ ನಾಯ್ಕ, ಮಂಜುನಾಥ ಚೌಹಾನ್ ಸಹಿತ ಸಮುದಾಯದ ಹಲವಾರು ಮಂದಿ ಉಪಸ್ಥಿತರಿದ್ದರು.
				
															
                    
                    
                    
                    































