ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ನ 12ನೇ ಸೀಸನ್ ಆರಂಭವಾಗಿದ್ದು 1 ವಾರದಲ್ಲೇ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಸ್ಪರ್ಧಿಗಳ ನಡುವೆ ಕಿಚ್ಚು ಹಚ್ಚಿಕೊಂಡಿದ್ದು, ವಾದ-ವಿವಾದ ಶುರುವಾಗಿದೆ. ಈ ಮಧ್ಯೆ ಬಿಗ್ ಬಾಸ್ ಶೋಗೆ ಬಹುದೊಡ್ಡ ಶಾಕ್ ಎದುರಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಕರಿಗೆ ನೋಟಿಸ್ ಜಾರಿ ಮಾಡಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಆಯೋಜಕರು ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಿಲ್ಲ ಎಂಬ ಕಾರಣಕ್ಕೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಬಿಗ್ ಬಾಸ್ ಮನೆಯನ್ನು ಬಂದ್ ಮಾಡುವಂತೆ ಸೂಚಿಸಿದ್ದು, ವೀಕ್ಷಕರಿಗೆ ಆಘಾತ ಎದುರಾಗಿದೆ.
ಬಿಡದಿ ಸಮೀಪದ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗಿದೆ. ಆರಂಭದಲ್ಲಿ ಒಟ್ಟು 19 ಜನರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ನೀಡಿದ್ದರು. ಇದೀಗ ಇಬ್ಬರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಸ್ಪರ್ಧಿಗಳೊಂದಿಗೆ ನೂರಾರು ಮಂದಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಿಂದ ಸಾಕಷ್ಟು ತಾಜ್ಯ ಉಂಟಾಗುತ್ತದೆ. ಆದರೆ ಸಮರ್ಪಕ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ ಎನ್ನುವ ದೂರು ಕೇಳಿ ಬಂದಿದೆ.
ಜಾಲಿವುಡ್ ಸ್ಟುಡಿಯೋ ನಡೆಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆದಿಲ್ಲ ಎನ್ನಲಾಗಿದ್ದು, ಈ ಕಾರಣದಿಂದ ಶೋ ಆಯೋಜಕರಿಗೆ ನೋಟಿಸ್ ನೀಡಲಾಗಿದೆ. ಜತೆಗೆ ಶೋ ಬಂದ್ ಮಾಡುವಂತೆ ಸೂಚಿಸಲಾಗಿದೆ. ಜಾಲಿವುಡ್ ಸ್ಟುಡಿಯೋದಿಂದ ದೊಡ್ಡ ಪ್ರಮಾಣದ ತಾಜ್ಯ ನೀರು ಹೊರಬರುತ್ತಿದೆ. ಅದನ್ನು ಸರಿಯಾಗಿ ಸಂಸ್ಕರಿಸದ ಕಾರಣ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ತ್ಯಾಜ್ಯವನ್ನು ಕೂಡ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ ಎಂಬ ಆರೋಪ ಎದ್ದಿದೆ. ಹೀಗಾಗಿ ಶೋ ನಿಲ್ಲುತ್ತಾ ಅಥವಾ ಆಯೋಜಕರು ಸೂಕ್ತ ಉತ್ತರ ನೀಡಿ ಶೋ ಮುಂದುವರಿಸಲು ಅನುಮತಿ ಪಡೆಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.