ಬಹುನಿರೀಕ್ಷಿತ ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-11ಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಎಲ್ಲವೂ ಹೊಸತನ ಎಂದು ಹೇಳಿದ್ದ ಪ್ರೋಮೋದಂತೆಯೇ ಹೊಸ ಅಧ್ಯಾಯವೇ ಶುರುವಾಗುತ್ತಿದೆ. ಇಲ್ಲಿವರೆಗೆ ಸ್ಪರ್ಧಿಗಳ ಹೆಸರನ್ನು ಒಂದೇ ವೇದಿಕೆಯಲ್ಲಿ ರಿವೀಲ್ ಮಾಡಲಾಗುತ್ತಿತ್ತು. ಆದರೆ, ಫಾರ್ ಎ ಚೇಂಜ್ ಎನ್ನುವಂತೆ ಈ ಬಾರಿ ಬೇರೆ ವೇದಿಕೆಯಲ್ಲಿ ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ.
ಈಗಾಗಲೇ ಬಿಗ್‌ಬಾಸ್ ಮನೆ ಸೇರುವ ನಾಲ್ಕು ಟಫ್ ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಗ್‌ಬಾಸ್‌ನ ಗ್ರ್ಯಾಂಡ್ ಓಪನಿಂಗ್ ಮುನ್ನವೇ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸಲಾಗಿದೆ. ಹೌದು, ನಿನ್ನೆ ನಡೆದ ರಾಜಾರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಕೆಲ ಸಂಸ್ಥೆಗಳ ಹೆಸರನ್ನು ವಾಹಿನಿ ಬಿಚ್ಚಿಟ್ಟಿದೆ.
ಇದೇ ವೇದಿಕೆಯಲ್ಲಿ ಬಿಗ್‌ಬಾಸ್ ಪ್ರೋಮೋ ಹಂಚಿಕೊಳ್ಳಲಾಗಿದ್ದು, ಮೊದಲ ಸ್ಪರ್ಧಿಯಾಗಿ ಕುರಿತೆರೆ ನಟಿ ಗೌತಮಿ ಜಾಧವ್ ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಸ್ಪರ್ಧಿಯಾಗಿ ವಕೀಲ್ ಸಾಬ್ ಖ್ಯಾತಿಯ ಲಾಯರ್ ಜಗದೀಶ್ ಬಿಗ್‌ಬಾಸ್ ಮನೆ ಸೇರಿದ್ದಾರೆ. ಈ ಹಿಂದೆ ವಂಚನೆ ಕೇಸ್‌ನಲ್ಲಿ ಜೈಲು ಸೇರಿ ಹೊರಬಂದಿರುವ ಚೈತ್ರಾ ಕುಂದಾಪುರ ಅಚ್ಚರಿಯ ರೀತಿಯಲ್ಲಿ ಸ್ಪರ್ಧಿಯಾಗಿದ್ದಾರೆ. ನಾಲ್ಕನೇ ಸ್ಪರ್ಧಿಯಾಗಿ ಮೈತುಂಬಾ ಚಿನ್ನ ಧರಿಸಿ ಗಮನ ಸೆಳೆದಿರುವ ಗೋಲ್ಡ್ ಸುರೇಶ್ ಹೆಜ್ಜೆ ಇಟ್ಟಿದ್ದಾರೆ.
ಲಾಯರ್ ಜಗದೀಶ್ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದರು. ರಾಜಕಾರಣಿಗಳ ಬಗ್ಗೆ ಗಂಭೀರ ಆರೋಪ ಮಾಡುತ್ತಿದ್ದ ಇವರು, ಇತ್ತೀಚೆಗೆ ನಟ ದರ್ಶನ್ ವಿಚಾರದಲ್ಲೂ ಹೇಳಿಕೆ ನೀಡಿ ಮನೆಮಾತಾಗಿದ್ದರು. ಮತ್ತೊಬ್ಬ ಸ್ಪರ್ಧಿ ಚೈತ್ರಾ ಕುಂದಾಪುರ ಹಿಂದೂಪರ ಭಾಷಣಗಳ ಮೂಲಕ ಖ್ಯಾತಿ ಪಡೆದಿದ್ದರು.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದ ಆರೋಪದಲ್ಲಿ ಜೈಲು ಸೇರಿ ಹೊರಬಂದಿದ್ದರು ಚೈತ್ರಾ. ಕಳೆದ ಸೀಸನ್ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಮಾದರಿಯಲ್ಲೇ ಈ ಬಾರಿ ಉತ್ತರ ಕರ್ನಾಟಕದ ಗೋಲ್ಡ್ ಸುರೇಶ್ ಮನೆಗೆ ಕಾಲಿಟ್ಟಿದ್ದು, ಮೈ ತುಂಬಾ ಚಿನ್ನ ಧರಿಸಿಕೊಂಡು ಕ್ರೇಜ್ ಹುಟ್ಟಿಸಿದ್ದಾರೆ.
ಆದರೆ ಐದನೇ ಸ್ಪರ್ಧಿಯ ಬಗ್ಗೆ ಇಂದು ನಡೆಯಲಿರುವ ಗ್ರ್ಯಾಂಡ್ ಓಪನಿಂಗ್ನಲ್ಲಿ ಬಹಿರಂಗಗೊಳ್ಳಲಿದೆ. ಈ ಬಾರಿಯ ಬಿಗ್‌ಬಾಸ್‌ನಲ್ಲಿ ಆರಂಭಕ್ಕೂ ಮುನ್ನವೇ ಸ್ವರ್ಗ ಮತ್ತು ನರಕ ಎಂಬ ಎರಡು ಮನೆಗಳನ್ನು ನಿರ್ಮಿಸಿರುವುದು ಗಮನ ಸೆಳೆದಿದೆ.
ಯಾವ ಸ್ಪರ್ಧಿ ಯಾವ ಮನೆಗೆ ಹೋಗಬೇಕು ಎಂಬುದನ್ನು ವೀಕ್ಷಕರೇ ವೋಟ್ ಮೂಲಕ ಹೇಳಬಹುದು. ವೋಟ್ ಆಧಾರದ ಮೇಲೆ ಸ್ಪರ್ಧಿಗಳನ್ನು ಸ್ವರ್ಗ ಅಥವಾ ನರಕದ ಮನೆ ತಲುಪಲಿದ್ದಾರೆ. ಮೊದಲ ನಾಲ್ಕು ಸ್ಪರ್ಧಿಗಳ ಪೈಕಿ ಎಲ್ಲರೂ ಟಫ್ ಎಂದು ಹೇಳಲಾಗುತ್ತಿದೆ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಬೆಂಕಿ, ಬಿರುಗಾಳಿ ತಪ್ಪಿದ್ದಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಇಂದಿನಿಂದ ಬಿಗ್‌ಬಾಸ್ ಸೀಸನ್-11 ಅದ್ಧೂರಿ ವೇದಿಕೆಯಲ್ಲಿ ಶುರುವಾಗಲಿದೆ. ಸಂಜೆ 6 ಗಂಟೆಗೆ ಬಿಗ್‌ಬಾಸ್ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು, ನಟ, ನಿರೂಪಕ ಕಿಚ್ಚ ಸುದೀಪ್ ಅವರು ಇನ್ನುಳಿದ ಸ್ಪರ್ಧಿಗಳನ್ನು ದೊಡ್ಮನೆಗೆ ಸ್ವಾಗತಿಸಲಿದ್ದಾರೆ.