ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಕಾರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ಕಳೆದ ವರ್ಷ ಘೊಷಿಸಲಾಗಿದೆ. ಸದ್ಯ ದೇಶದಲ್ಲಿ ಕಾರುಗಳ ಬಳಕೆ ಹೆಚ್ಚಾಗುತ್ತಿದೆ, ಮಧ್ಯಮ ವರ್ಗಗಳು ಕೂಡ ಖರೀದಿಸುವಷ್ಟು ಅಗ್ಗದ ಬೆಲೆಯ ಕಾರುಗಳು ದೇಶದಲ್ಲಿ ಲಭ್ಯವಿದೆ. ಆದರೆ ಸುರಕ್ಷತೆ ವಿಷಯದಲ್ಲಿ ಮಾತ್ರ ಹಿಂದುಳಿದಿದೆ.
ಸೀಟ್ ಬೆಲ್ಟ್ (Seat Belt) ವಿಷಯದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಏಪ್ರಿಲ್ 1, 2025 ರಿಂದ ತಯಾರಾಗುವ ಎಲ್ಲಾ ಕಾರುಗಳು ‘ಹಿಂಬದಿ ಸೀಟ್ ಬೆಲ್ಟ್ ಅಲಾರಂ’ ಅನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿದೆ.
ಇದೀಗ ಹೊಸ ಬೆಳವಣಿಗೆ ಆಗಿದ್ದು, ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ ಇತ್ತೀಚಿನ ಅಧಿಸೂಚನೆಯು ಹಿಂದಿನ ಸೀಟ್ ಬೆಲ್ಟ್ ಅಲಾರಂಗೆ ಮಾತ್ರವಾಗಿದೆ. ಬೇರೆ ಯಾವುದೇ ಹೊಸ ನಿಬಂಧನೆಗಳಿಲ್ಲ ಎಂದಿದ್ದಾರೆ. ಹೊಸ ಕಾನೂನಿನ ಪ್ರಕಾರ ಹಿಂದಿನ ಆಸನದ ಪ್ರಯಾಣಿಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಇಲ್ಲದಿದ್ದರೆ ಮೋಟಾರು ವಾಹನ ಕಾಯ್ದೆಯಡಿ 1,000 ರೂ. ದಂಡ ವಿಧಿಸಲಾಗುವುದು.