ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸುಪಾರಿ ಕಿಲ್ಲರ್ ಗಳನ್ನು ಬಂಧಿಸಲಾಗಿದೆ.
ಬಿಕ್ಲು ಶಿವ ಕೊಲೆಗೆ ಸುಪಾರಿ ಪಡೆದಿದ್ದ ನಟೋರಿಯಸ್ ಗಳ ಪೈಕಿ ಕೋಲಾರ ಜಿಲ್ಲೆಯ ನಾಲ್ಕು ಸುಪಾರಿ ಕಿಲ್ಲರ್ ಗಳನ್ನು ಬೆಂಗಳೂರಿನ ಭಾರತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಿನ್ನಹಳ್ಳಿ ಗ್ರಾಮದ ಅಭಿಷೇಕ್, ಪೆಮ್ಮದೊಡ್ಡಿ ಗ್ರಾಮದ ನರಸಿಂಹ, ಚಿಕ್ಕದಾನವಹಳ್ಳಿ ಗ್ರಾಮದ ಮುರುಗೇಶ್ ಹಾಗೂ ಬಂಗಾರಪೇಟೆ ತಾಲೂಕಿನ ಮಾರಾಂಡಹಳ್ಳಿ ಗ್ರಾಮದ ಸುದರ್ಶನ್ ಬಂಧಿತ ಆರೋಪಿಗಳು.
ಬಂಧಿತರಲ್ಲಿ ಮುರುಗೇಶ್ ತಮಿಳುನಾಡಿನ ಬೇರಕಿ ಕಾರ್ತಿಕ್ ಹತ್ಯೆ ಕೇಸ್ ನಲ್ಲಿ ಭಾಗಿಯಾದವನು. ಉಳಿದ ಮೂವರು ಆರೋಪಿಗಳು ಕೂಲಿ, ವ್ಯವಸಾಯ ಮಾಡಿಕೊಂದಿದ್ದವರು ಎಂದು ತಿಳಿದುಬಂದಿದೆ.
ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪದಡಿ ಅವಿನಾಶ್, ಮುರುಗೇಶ್, ನರಸಿಂಹ ಹಾಗೂ ಸುದರ್ಶನ್ ಎಂಬುವರನ್ನ ಕೋಲಾರದ ಟೆಕಲ್ ಬಳಿ ಇಂದು ಬಂಧಿಸಿ ನಗರಕ್ಕೆ ಕರೆತರಲಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಳೆದ್ವೇಷ ಹಾಗೂ ಜಮೀನು ವಿಚಾರಕ್ಕಾಗಿ ಜುಲೈ 15ರಂದು ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆ ಬಳಿ ಬಿಕ್ಷು ಶಿವನನ್ನ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಹತ್ಯೆ ಬಳಿಕ ಕಿರಣ್, ವಿಮಲ್, ಪ್ರದೀಪ್, ಮದನ್ ಹಾಗೂ ಸ್ಯಾಮ್ಯುವೆಲ್ ಎಂಬವರನ್ನು ಬಂಧಿಸಲಾಗಿತ್ತು. ಕೃತ್ಯ ನಡೆಸಲು ಕಾರು ನೀಡಿದ ಆರೋಪ ಮೇರೆಗೆ ಅರುಣ್ ಹಾಗೂ ನವೀನ್ ಎಂಬವರನ್ನು ಬಂಧಿಸಲಾಗಿತ್ತು. ಇದೀಗ ಹತ್ಯೆಗೆ ಸುಪಾರಿ ಪಡೆದ ಆರೋಪದಡಿ ನಾಲ್ವರನ್ನು ಬಂಧಿಸಲಾಗಿದೆ.