ನವದೆಹಲಿ : ಕ್ರಿಮಿನಲ್ ಪ್ರಕರಣಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರನ್ನು ತನಿಖಾ ಸಂಸ್ಥೆಗಳು ವಶಕ್ಕೆ ಪಡೆದರೆ ಅಥವಾ ಬಂಧಿಸಿದರೆ, ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲು ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಮಂಡನೆ ಮಾಡಲು ಕೇಂದ್ರ ಸಿದ್ಧತೆ ಮಾಡಿಕೊಂಡಿದೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕರಡು ಮಸೂದೆಗೆ ಅನುಮೋದನೆ ನೀಡಿದೆ. 1963ರ ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆ ಅನ್ವಯ ಕೇಂದ್ರಾಡಳಿತ ಪ್ರದೇಶದ ಸಿಎಂ, ಸಚಿವರ ವಜಾಕ್ಕೆ ಯಾವುದೇ ಅವಕಾಶ ಇಲ್ಲ. ಅದೇ ರೀತಿ ಪ್ರಧಾನಿ, ಕೇಂದ್ರ ಸಚಿವರ ವಜಾಕ್ಕೂ ಕಾಯ್ದೆಯಲ್ಲಿ ಅವಕಾಶ ಇರದ ಕಾರಣ ಈ ಹಿನ್ನೆಲೆಯಲ್ಲಿ ಹೊಸ ತಿದ್ದುಪಡಿ ಕಾಯ್ದೆ ಮೂಲಕ ಅವಕಾಶವನ್ನು ಕಲ್ಪಿಸಲಾಗುತ್ತಿದೆ.
ಆದರೆ ಪ್ರಸ್ತಾವಿತ ಕಾನೂನು ಹೇಳುವಂತೆ, ಪ್ರಧಾನಿ, ಯಾವುದೇ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಚಿವರು ಬಂಧಿಸಲ್ಪಟ್ಟು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ, ಅವರು 31ನೇ ದಿನದೊಳಗೆ ರಾಜೀನಾಮೆ ನೀಡಬೇಕು ಅಥವಾ ಸ್ವಯಂಚಾಲಿತವಾಗಿ ಪದಚ್ಯುತಗೊಳಿಸಬೇಕು.
5 ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಒಳಗಾಗುವ ಕ್ರಿಮಿನಲ್ ಅಪರಾಧ ಪ್ರಕರಣಗಳಿಗೆ ಈ ನಿಯಮ ಅನ್ವಯವಾಗಲಿದೆ. ಈಗಿರುವ ನಿಯಮಗಳ ಪ್ರಕಾರ, ಯಾವುದೇ ಜನಪ್ರತಿನಿಧಿ ಕ್ರಿಮಿನಲ್ ಪ್ರಕರಣಗಳಲ್ಲಿ 2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾದರೆ ಮಾತ್ರವೇ ಜನಪ್ರತಿನಿಧಿ ಸ್ಥಾನ ಕಳೆದುಕೊಳ್ಳುತ್ತಾರೆ. ಅಲ್ಲದೇ ಶಿಕ್ಷೆಯ ಬಳಿಕ ಮತ್ತೆ 5 ವರ್ಷ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಇಲ್ಲ ಎಂದಿದೆ.