ಚಿತ್ರದುರ್ಗ :ಬ್ರಿಟೀಷರ ಸಾಮ್ರಾಜ್ಯಶಾಹಿ ವಿರುದ್ದ ಹೋರಾಡಿ ಅಮರನಾದ ಬಿರ್ಸಾ ಮುಂಡಾ ದೇಶದ ಆದಿವಾಸಿ ಬುಡಕಟ್ಟುಗಳ ಆತ್ಮಾಭಿಮಾನದ ಪ್ರತೀಕ ಎಂದು ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ವಾಲ್ಮೀಕಿ ಭವನದಲ್ಲಿ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜನಜಾತೀಯ ಗೌರವ್ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಪ್ರಾಕೃತಿಕ ಸಂಪತ್ತಿನ ಮೇಲೆ ಒಡೆತನ ಸಾಧಿಸಲು ಬ್ರಿಟೀಷರು ಪ್ರಯತ್ನಿಸಿದಾಗ, ಬಿರ್ಸಾ ಮುಂಡಾ ಅವರ ವಿರುದ್ದ ದಂಗೆ ಎದ್ದು, ಪ್ರಕೃತಿಯನ್ನು ರಕ್ಷಿಸುವ ಹೋರಾಟದಲ್ಲಿ ಹುತಾತ್ಮನಾದ. ಕೇವಲ 25 ವರ್ಷ ಬದುಕಿದ್ದ ಬಿರ್ಸಾ ಮುಂಡಾ ಅವರ ಹೋರಾಟದ ಕಥೆ ಕೇಳಿದರೆ ನಮಗೆ ರೋಮಾಂಚನವಾಗುತ್ತಿದೆ. ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬುದನ್ನು ತೋರಿಸುತ್ತದೆ ಎಂದು ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರನಾಥ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ದೇಶದ ಬುಡಕಟ್ಟು ಜನರ ಮೇಲೆ ಬ್ರಿಟೀಷ್ ಸಾಮ್ರಾಜ್ಯಶಾಹಿಗಳು, ಧರ್ಮ ಪ್ರಚಾರಕರ ದಬ್ಬಾಳಿಕೆ ಹಾಗೂ ಯಜಮಾನಿಕೆಯನ್ನು ಬಿರ್ಸಾ ಮುಂಡಾ ದಿಟ್ಟತನದಿಂದ ಎದುರಿಸಿದ. ಬುಡಕಟ್ಟು ಜನರಲ್ಲಿ ಇದ್ದ ಮೂಢ ನಂಬಿಕೆಯನ್ನು ತೊಡೆದು ಹಾಕಿದ ಅವರು, ತನ್ನನ್ನು ತಾನು ದೇವರ ಅವತಾರ ಎಂದು ಘೋಷಿಸಿಕೊಂಡಿದ್ದರು. ಜನರು ಬಿರ್ಸಾ ಮುಂಡಾನನ್ನು ‘ಧರ್ತಿ ಅಭಾ’ (ಭೂಮಿಯ ತಂದೆ) ಎಂದು ಕರೆದಿದ್ದಾರೆ. ಈಗಲೂ ಬುಡಕಟ್ಟು ಜನರ ಕಥೆಗಳಲ್ಲಿ ಬಿರ್ಸಾ ಮುಂಡಾ ಜೀವಂತವಾಗಿದ್ದಾನೆ. ಭಾರತ ಸರ್ಕಾರ 2019 ರಿಂದ ಭಗವಾನ್ ಬಿರ್ಸಾ ಮುಂಡಾರವರ ಜನ್ಮದಿನಾಚರಣೆಯನ್ನು ಜನ ಜಾತೀಯ ಗೌರವ ದಿವಸ್ ಎಂದು ಆಚರಿಸುತ್ತಿದೆ. ಭಾರತದ ಸಂಸತ್ತಿನ ಆವರಣದಲ್ಲಿ ಬಿರ್ಸಾ ಮುಂಡಾ ಪ್ರತಿಮೆ ಸ್ಥಾಪಿಸಲಾಗಿದೆ. ಕೃಷಿ ವಿಶ್ವ ವಿದ್ಯಾಲಯ, ತಂತ್ರಜ್ಞಾನ ಕಾಲೇಜು, ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಸರ್ಕಾರಿ ಸಂಸ್ಥೆಗಳಿಗೆ ಜಾರ್ಖಂಡ್ ಸರ್ಕಾರ ಬಿರ್ಸಾ ಮುಂಡಾ ಹೆಸರನ್ನು ಇರಿಸಿ ಗೌರವ ಸೂಚಿಸಿದೆ ಎಂದು ಹೇಳಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಮಕ್ಕಳು ಕಾರ್ಯಕ್ರಮದಲ್ಲಿ ಬುಡಕಟ್ಟು ನೃತ್ಯಗಳನ್ನು ಪ್ರದರ್ಶಿಸಿದರು.
ಪರಿಶಿಷ್ಟ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಹೆಚ್. ದಿವಾಕರ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ವೇಮಣ್ಣ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
































