ಸ್ಪೀಕರ್‌ ಯು.ಟಿ.ಖಾದರ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಬಿಜೆಪಿ

WhatsApp
Telegram
Facebook
Twitter
LinkedIn

ಮಂಗಳೂರು: ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಬಿಜೆಪಿ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ. ಮಂಗಳೂರಿನಲ್ಲಿ ನಿನ್ನೆ ಬಿಜೆಪಿ ಶಾಸಕ ಡಾಸ. ಭರತ್‌ ಶೆಟ್ಟಿ ಸುದ್ದಿಗೋಷ್ಠಿ ಕರೆದು ಸ್ಪೀಕರ್‌ ಕಚೇರಿ ನವೀಕರಣ ಮತ್ತಿತರ ವ್ಯವಹಾರಗಳಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಆರೋಪಿಸಿದ್ದರು. ಅದೇ ರೀತಿ ಬೆಂಗಳೂರು ಮತ್ತಿತರೆಡೆಗಳಲ್ಲಿ ಬಿಜೆಪಿ ನಾಯಕರು ಸುದ್ದಿಗೋಷ್ಠಿಗಳಲ್ಲಿ ಖಾದರ್‌ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿ ಖಾದರ್‌ ಅವರಿಂದಾಗಿ ಸ್ಪೀಕರ್‌ ಹುದ್ದೆಯ ಘಟನತೆಗೆ ಕುಂದುಂಟಾಗಿದೆ ಎಂದು ಹೇಳಿದ್ದಾರೆ.

ಸ್ಪೀಕರ್‌ ಅವಧಿಯಲ್ಲಿ ವಿವಾದ, ಗೊಂದಲ, ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ ಎಂದು ಸಂಸದ ಮತ್ತು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಗಳೂರಿನಲ್ಲಿ ಆರೋಪಿಸಿದ್ದಾರೆ. ಇದೇ ಆರೋಪವನ್ನು ಮಂಗಳೂರಿನಲ್ಲಿ ಶಾಸಕ ಡಾ.ಭರತ್‌ ಶೆಟ್ಟಿ ಮಾಡಿದ್ದಾರೆ. ಸ್ಪೀಕರ್ ಸ್ಥಾನದ ವಿರುದ್ಧ ಬಂದಿರುವ ಆರೋಪಗಳಿಂದ ಆ ಸ್ಥಾನವು ಮುಕ್ತವಾಗಬೇಕು. ಇದಕ್ಕಾಗಿ ಕಾರ್ಯನಿರತ ನ್ಯಾಯಮೂರ್ತಿಗಳಿಂದ ಆರೋಪಗಳ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಪೀಕರ್ ಕಾರ್ಯಾಲಯದ ಟೆಂಡರ್ ಮಂಗಳೂರು ಮೂಲದವರಿಗೇ ಯಾಕೆ ಸಿಗುತ್ತಿದೆ, ಅದೂ ಯಾರಿಗೋ ಕೆಲವರಿಗೇ ಯಾಕೆ ಸಿಗುತ್ತಿದೆ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ. ಹಣಕಾಸು ಇಲಾಖೆ ಖರೀದಿಗಳನ್ನು ತಿರಸ್ಕರಿಸಿದೆ. ಬಳಿಕ ಹಣಕಾಸು ಇಲಾಖೆ ಹೊಣೆ ಹೊತ್ತ ಮುಖ್ಯಮಂತ್ರಿಗಳೇ ಒಪ್ಪಿಗೆ ಕೊಡಿಸಿದ ಆರೋಪವಿದೆ. ಯು.ಟಿ. ಖಾದರ್‌ಗೆ ಸ್ವತಃ ಸಿಎಂ ಅವರೇ ಬೆಂಬಲ ಕೊಟ್ಟಿದ್ದಾರೆ. ಖರೀದಿ ತುರ್ತಾಗಿ ಮಾಡಬೇಕಾದ ಕೆಲಸ ಏನಿತ್ತು? ಎಂದು ಕೇಳಿದ್ದಾರೆ.

ವಿಧಾನಸಭೆಯ ಪ್ರಧಾನ ಬಾಗಿಲಿಗೆ ರೋಸ್‌ವುಡ್‍ನ ಮರದ ಕೆತ್ತನೆಯ ಚೌಕಟ್ಟನ್ನು ಮಾಡಿಸಿದಲ್ಲಿಂದ ಭ್ರಷ್ಟಾಚಾರದ ಆರೋಪಗಳು ಆರಂಭವಾಗಿದ್ದವು. ಸಭಾಂಗಣಕ್ಕೆ ಹೊಸ ಟಿ.ವಿ. ಸೆಟ್ ಅಳವಡಿಸಿದ್ದರು. ಎಐ ಮಾನಿಟರ್ ಸಿಸ್ಟಂ ಅನ್ನು ಹಾಕಲು ಸಾಕಷ್ಟು ಖರ್ಚು ವೆಚ್ಚಗಳಾಗಿವೆ. ಎಲ್ಲ ಶಾಸಕರಿಗೆ ಗಂಡಭೇರುಂಡ ಹೋಲಿಕೆಯ ಗಡಿಯಾರಗಳನ್ನು ಕೊಟ್ಟರು. ಮೊಗಸಾಲೆಯಲ್ಲಿ ಯಂತ್ರ ಅಳವಡಿಸಿ ಮಸಾಜ್ ಪಾರ್ಲರ್ ಮಾದರಿಯಲ್ಲಿ ಬದಲಾಯಿಸಿದ್ದಕ್ಕೆ ದೊಡ್ಡ ಪ್ರಮಾಣದ ವಿರೋಧ ವ್ಯಕ್ತವಾಗಿತ್ತು.ಸರ್ಕಾರದ ವತಿಯಿಂದ ಊಟ, ಉಪಹಾರ ಕೊಡಲು ಸ್ಪೀಕರ್ ಆರಂಭಿಸಿದರು. ಇದು ಅಗತ್ಯವಿತ್ತೇ? ನೆಲಹಾಸು ಹೊದಿಕೆ ಬದಲಿಸಿ, ಕಾರ್ಪೆಟ್ ಬದಲಿಸಿದ್ದಲ್ಲದೆ ಸುಣ್ಣ ಬಣ್ಣ ಹೊಡೆಸಿದರು. ಅವರು ಒಂದೊಂದು ಮುಟ್ಟಿದರೂ ಅದರೊಳಗೆ ಇನ್ನೇನೋ ಇದೆ ಎಂಬ ಅನುಮಾನಗಳು ವ್ಯಾಪಕವಾಗಿ ಬೆಳವಣಿಗೆ ಆಗಿದೆ ಎಂದು ದೂರಿದ್ದಾರೆ.

ಶಾಸಕರ ಭವನದಲ್ಲಿ ಶಾಸಕರ ಕೊಠಡಿಗಳನ್ನು ಭದ್ರಪಡಿಸಲು, ಇನ್ನಷ್ಟು ವ್ಯವಸ್ಥೆ ಕಲ್ಪಿಸಿಕೊಡಲು ಸ್ಮಾರ್ಟ್ ಡೋರ್ ಲಾಕರ್ ಹಾಕಿಸಿದರು. ಗೋದ್ರೆಜ್‍ನಂಥ ಕಂಪನಿಯವರ ಬೆಲೆ 14- 16 ಸಾವಿರ ರೂ.ಇದೆ ಎಂದು ಆನ್‍ಲೈನ್ ಪರಿಶೀಲನೆಯಿಂದ ಗೊತ್ತಾಗುತ್ತದೆ. ಅದಕ್ಕೆ ಇವರು 49 ಸಾವಿರಕ್ಕಿಂತ ಹೆಚ್ಚು ಖರ್ಚು ತೋರಿಸಿದ್ದಾರೆ. ಇದರ ಜತೆಗೆ ಸ್ಮಾರ್ಟ್ ಸೇಫ್ ಲಾಕರ್ ಹಾಕಿಸಿದರು. ಅದು ಮಾರ್ಕೆಟ್‍ನಲ್ಲಿ 8-9 ಸಾವಿರಕ್ಕೆ ಸಿಗುವುದಾಗಿ ಆನ್‍ಲೈನ್‍ನಲ್ಲಿದೆ. ಇವರು 35 ಸಾವಿರದ ಮೇಲೆ ದರ ವಿಧಿಸಿದರು ಎಂದು ಆರೋಪಿಸಿದ್ದಾರೆ.

ಮಾರುಕಟ್ಟೆಯಲ್ಲಿ ಸುಮಾರು 30 ಸಾವಿರಕ್ಕೆ ಲಭ್ಯ ಇರುವ ಸ್ಮಾರ್ಟ್ ಎನರ್ಜಿ ಸೊಲ್ಯೂಷನ್‌ಗೆ 90,500 ರೂ. ವಿಧಿಸಿದ್ದಾರೆ. ಸ್ಟೇನ್‍ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ ಆನ್‍ಲೈನ್‍ನಲ್ಲಿ 16 ಸಾವಿರದಿಂದ 53 ಸಾವಿರದಲ್ಲಿ ಲಭ್ಯವಿದ್ದು, 65 ಸಾವಿರ ವಿಧಿಸಲಾಗಿದೆ. ಒಟ್ಟು 235 ರಷ್ಟು ಖರೀದಿ ಆಗಿದೆ. 123 ಸ್ಮಾರ್ಟ್ ಎನರ್ಜಿ ಸೊಲ್ಯೂಷನ್ ಖರೀದಿ ಮಾಡಿದ್ದಾರೆ. 224 ಸೇಫ್ ಲಾಕರ್, ಅಷ್ಟೇ ಸಂಖ್ಯೆಯ ಡೋರ್ ಲಾಕರ್ ಖರೀದಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

4-5 ದಿನಗಳ ಪುಸ್ತಕ ಮೇಳಕ್ಕೆ 4.5 ಕೋಟಿ ಖರ್ಚು ಮಾಡಿದ್ದಾರೆ. ಪುಸ್ತಕ ಕೊಂಡು ಹಂಚಿದರೂ ಇಷ್ಟಾಗುತ್ತಿತ್ತೇ ಗೊತ್ತಿಲ್ಲ. ಇವರು ಸ್ಟಾಲ್ ಹಾಕುವುದು ಬಿಟ್ಟು ಬೇರೇನೂ ಇಲ್ಲ. ಲೈಟಿಂಗ್ ಮಾಡಿದ್ದಾರೆ. ಶಾಸಕರ ಭವನಕ್ಕೆ ಮಂಚ, ಟೇಬಲ್ ಹಾಕಿಸಿದ್ದಾರೆ. ನೇಮಕಾತಿಗೆ ಕೋರ್ಟಿನಲ್ಲಿ ತಡೆಯಾಜ್ಞೆ ವಿಧಿಸಲಾಗಿದೆ. ಇದರ ವಿಷಯದಲ್ಲಿ ಮೊಗಸಾಲೆಯ ಸುದ್ದಿಗಳೇನು? ಇದೆಲ್ಲ ಆ ಸ್ಥಾನಕ್ಕೆ ಕುಂದು ಬರುವಂತಿದೆ. ಯು.ಟಿ. ಖಾದರ್ ಅವರು ಈಗಲೂ ವಿದೇಶದಲ್ಲೇ ಇದ್ದಾರೆ. ಅವರು ಎಷ್ಟು ದೇಶಗಳಿಗೆ ಹೋಗಿದ್ದಾರೆ. ಅವರೆಷ್ಟು ಖರ್ಚು ಹಾಕಿ ಸರ್ಕಾರ ಎಷ್ಟು ಹಣ ಕೊಟ್ಟಿದೆ ಎಂದು ಕೇಳಿದ್ದಾರೆ.

ನಾನೂ ಸ್ಪೀಕರ್ ಆಗಿ ವಿದೇಶಗಳಿಗೆ ಹೋಗಿದ್ದೇನೆ. ನಮಗಿರೋ ಅವಕಾಶ ಮೀರಿ, ಎಷ್ಟು ಪ್ರವಾಸ ಮಾಡಿದ್ದಾರೆ. ಯಾರ‍್ಯಾರ ಜತೆ ಪ್ರವಾಸ ಮಾಡಿದ್ದಾರೆ? ಇವೆಲ್ಲವೂ ಬಹಿರಂಗಗೊಳ್ಳಬೇಕಿದೆ. ವಿದೇಶಗಳ ಅಧ್ಯಯನದ ಹೆಸರಿನಲ್ಲಿ ನಡೆದ ಪ್ರವಾಸದ ವಿವರ ಬಹಿರಂಗಗೊಳಿಸಿ ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾಧ್ಯಕ್ಷರಾಗಿ ರಾಜಕೀಯ, ಸಾರ್ವಜನಿಕ ಜೀವನದ ಸಾಕಷ್ಟು ಅನುಭವ ಇರುವ ಯು.ಟಿ.ಖಾದರ್ ಅವರು ಸ್ಪೀಕರ್ ಹುದ್ದೆಯ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಆಡಳಿತ ಸುಧಾರಣೆ ಹೆಸರಿನಲ್ಲಿ ಅನೇಕ ಭ್ರಷ್ಟಾಚಾರಗಳು ನಡೆಯುತ್ತಿವೆ. ಆ ಪೀಠಕ್ಕೆ ಇಂಥ ಆರೋಪಗಳು ಬರುತ್ತಿವೆ.

2023ರಲ್ಲಿ 10 ಬಿಜೆಪಿ ಶಾಸಕರನ್ನು ಹೊರಗೆ ಹಾಕಿದ್ದಾಗಲೇ ಪಕ್ಷದ ಸೂಚನೆಯಂತೆ ಯು.ಟಿ.ಖಾದರ್ ಅವರು ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಅವರ ಮೇಲೆ ಬಂದಿತ್ತು. ನಂತರ 18 ಶಾಸಕರನ್ನು ಹೊರಗೆ ಹಾಕಿದ ಮೇಲಂತೂ ಸ್ಪೀಕರ್ ಪಕ್ಷದ ಕೈಗೊಂಬೆ ಆಗಿದ್ದಾರೇನೋ, ಆಡಳಿತದಲ್ಲಿ ಇರುವವರು ಇವರನ್ನು ಹಾಗೆ ಬಳಸಿಕೊಳ್ಳುತ್ತಿದ್ದಾರೇನೋ ಎಂಬ ಆರೋಪ ಬರುವುದಕ್ಕೆ ಆರಂಭವಾಯಿತು. ಸದನದಲ್ಲಿ ಭಾಗವಹಿಸುವಾಗ, ಚರ್ಚೆಯ ವೇಳೆ ಸ್ಪೀಕರ್ ಅವರು ಪ್ರತಿಪಕ್ಷ ಬಿಜೆಪಿಯವರಿಗೆ ಅವಕಾಶ ಎಷ್ಟು ಕೊಡುತ್ತಾರೆ, ಕೊಡುತ್ತಿಲ್ಲ ಎಂಬ ವಿಚಾರ ಚರ್ಚೆ ಶುರುವಾಯಿತು ಎಂದಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon