ಮೈಸೂರು: ‘ಧರ್ಮಸ್ಥಳ ಚಲೋ ಎಂದು ಹೋಗಿ ಸಮಾವೇಶ ಮಾಡಿದ ಬಿಜೆಪಿಗರು, ಮೊದಲು ಧರ್ಮಾಧಿಕಾರಿ ಡಾ।ವಿರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸುತ್ತಾರೆ. ನಂತರ ಹೆಗ್ಗಡೆ ಕುಟುಂಬದ ಮೇಲೆಯೇ ಆರೋಪ ಇರುವ ಹತ್ಯೆಯಾದ ಸೌಜನ್ಯಾಳ ಮನೆಗೂ ಹೋಗುತ್ತಾರೆ. ಹಾಗಾದರೆ ಬಿಜೆಪಿಯವರು ಯಾರ ಪರ ಇದ್ದಾರೆ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಮೂಲಕ ಸೌಜನ್ಯ ಮನೆಗೆ ಮೊನ್ನೆ ತೆರಳಿ ಕಾನೂನು ಹೋರಾಟಕ್ಕೆ ನೆರವು ನೀಡುವುದಾಗಿ ಆಕೆಯ ಕುಟುಂಬಕ್ಕೆ ಭರವಸೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹತ್ಯೆಯಾದ ಸೌಜನ್ಯ ಪ್ರಕರಣವನ್ನು ಮತ್ತೆ ಸಿಬಿಐಗೆ ಕೊಡಬೇಕು ಎಂದು ಬಿಜೆಪಿ ಹೇಳುತ್ತಿದೆ. ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಅವರೇ ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸುಪ್ರೀಂ ಕೋರ್ಟ್‌ಗೆ ಹೋಗಬೇಕೆಂದು ಬಿಜೆಪಿ ಹೇಳುತ್ತಿದೆ. ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೇಲೆಯೇ ಆರೋಪವಿದೆ. ಹಾಗಾದರೆ, ಬಿಜೆಪಿಯವರು ಯಾರ ಪರ ಇದ್ದಾರೆ?’ ಎಂದು ಪ್ರಶ್ನಿಸಿದರು. ಸೌಜನ್ಯ ಪ್ರಕರಣದ ಮರು ತನಿಖೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ನಾನು ಅದರ ತೀರ್ಪನ್ನು ನೋಡಿಲ್ಲ. ಈ ಬಗ್ಗೆ ಸೌಜನ್ಯ ತಾಯಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಬಿಜೆಪಿಯದು ರಾಜಕೀಯ ಯಾತ್ರೆ: ಧರ್ಮಸ್ಥಳಕ್ಕೆ ಬಿಜೆಪಿ ಕೈಗೊಂಡಿರುವುದು ಧರ್ಮಯಾತ್ರೆಯಲ್ಲ, ರಾಜಕೀಯ ಯಾತ್ರೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿಯವರು ಈಗ ಎನ್ಐಎ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಹಾಗಾದರೆ, ನಮ್ಮ ಪೊಲೀಸರ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲವೇ? ಎಸ್ಐಟಿ ರಚನೆಯಾದ ಪ್ರಾರಂಭದಲ್ಲಿ ಎನ್ಐಎ ತನಿಖೆ ಮಾಡಿ ಎನ್ನಲಿಲ್ಲ. ನಂತರ, ಮೃತದೇಹಗಳು ಸಿಗದೇ ಹೋದಾಗ ಎನ್‌ಐಎ ತನಿಖೆಗೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.