ಕೊಡಗು : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಬಿಜೆಪಿ ನಾಯಕರು ಕೊಡಗಿನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಡಿವೈಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಿಜಯೇಂದ್ರ, ಪ್ರತಾಪ್ ಸಿಂಹ, ಯದುವೀರ್ ಒಡೆಯರ್ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಶಾಸಕರಾದ ಪೊನ್ನಣ್ಣ, ಮಂಥರ್‌ಗೌಡ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಕುಶಾಲನಗರ ತಾಲೂಕು ಆಸ್ಪತ್ರೆ ಆವರಣದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಪ್ರೀತಂಗೌಡ ಭಾಗಿಯಾಗಿದ್ದರು. ಜೊತೆಗೆ ನೂರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಶಾಸಕರನ್ನು ಪ್ರಶ್ನಿಸಲೇ ಬಾರದಾ? ಬಿಜೆಪಿ ಕಾರ್ಯಕರ್ತರು ಎದೆಗುಂದಬೇಡಿ. ಆತ್ಮಹತ್ಯೆ ಮಾಡಿಕೊಳ್ಳಬೇಡಿ. ರಣಹೇಡಿ, ಕೊಲೆಗಡುಕ ಸರ್ಕಾರದ ವಿರುದ್ಧ ಹೋರಾಡಿ. ಸಿದ್ದರಾಮಯ್ಯ ಕೊಲೆಗಡುಕು ಮುಖ್ಯಮಂತ್ರಿ. 16 ಬಜೆಟ್ ಮಂಡಿಸಿದ ಸಿಎಂ ಅಂತೆ, ಇವರ ಯೋಗ್ಯತೆಗೆ. ಕೊಲೆಗಡುಕ ಸಿಎಂ ಕೊಲೆಗಡುಕರ ಬೆಂಬಲವಾಗಿ ನಿಂತಿದ್ದಾರೆ. ಪೊಲೀಸ್ ಇಲಾಖೆ ಆಡಳಿತ ಸರ್ಕಾರದ ಕೈಗೊಂಬೆ ಆಗಿದೆ. ಪೊಲೀಸ್ ಅಧಿಕಾರಿಗಳೇ ಬಹಳ ದಿನ ಕಾಂಗ್ರೆಸ್ ದರ್ಬಾರ್ ನಡೆಯಲ್ಲ. ಯೂನಿಫಾರ್ಮ್ ಗೆ ಗೌರವ ಕೊಟ್ಟು ನಡೆದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಕಾನೂನು ಪ್ರಕಾರ ನಡೆಯದೇ ಇದ್ದರೆ, ಪೊಲೀಸ್ ಠಾಣೆಗೆ ನುಗ್ಗಿ ಜನ ಬೆಂಕಿ ಹಚ್ಚುತ್ತಾರೆ ಹುಷಾರ್. ಅದಕ್ಕೆ ಪೊಲೀಸರೇ ಜವಾಬ್ದಾರರಾಗುತ್ತಾರೆ. ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆ ಆಗಬೇಕು. ನಮಗೆ ಪೊಲೀಸರ ಮೇಲೆ ನಂಬಿಕೆ ಇಲ್ಲ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕೋಣ. ಇದು ಭಂಡ ಸರ್ಕಾರ. ಪೊಲೀಸರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕಿಡಿಕಾರಿದರು.