ಬೆಂಗಳೂರು : ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ಅವರನ್ನು ವಜಾಗೊಳಿಸಬೇಕು ಎಂದು ಬಿಜೆಪಿ ನಾಯಕರು ಗುರುವಾರ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರಲ್ಲಿ ಮನವಿ ಮಾಡಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಶ್ವಾನಕ್ಕೆ ಹೋಲಿಸಿದ್ದರು. ಇದರಿಂದ ಆಕ್ರೋಶಗೊಂಡ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚಿತ್ತಾಪೂರ ಪಟ್ಟಣದ ಪ್ರವಾಸಿ ಮಂದಿರದ ಎದರುಗಡೆ ಛಲವಾದಿ ನಾರಾಯಣಸ್ವಾಮಿಗೆ ಘೇರಾವ್ ಹಾಕಿದ್ದರು. ಜೊತೆಗೆ ಅವರ ಕಾರಿನ ಮೇಲೆ ಬಣ್ಣ ಎರಚಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಬಿಜೆಪಿ ನಾಯಕರು ಖಂಡಿಸಿದ್ದು, ಗುರುವಾರ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ತಕ್ಷಣ ಘಟನೆ ಸಂಬಂಧ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು. ಹಾಗೂ ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ಅವರನ್ನು ವಜಾಗೊಳಿಸಬೇಕು ಎಂದು ಕೋರಿದ್ದಾರೆ.
ಗುರುವಾರ ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಾಯಕರು, ಘಟನೆ ಸಂಬಂಧ ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಬೇಕು. ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆಯನ್ನು ವಜಾಗೊಳಿಸಬೇಕು. ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಮನವಿ ಪತ್ರ ನೀಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್, ನಿನ್ನೆ ಚಾರ್ಜ್ ಶೀಟ್ ಬಿಡುಗಡೆ ಮಾಡಿ ಕಲಬುರಗಿ ಕಾರ್ಯಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಹೋಗಿದ್ದು, ಪರಿಷತ್ ವಿಪಕ್ಷ ನಾಯಕ ಸರ್ಕಾರವನ್ನು ಪ್ರಶ್ನೆ ಮಾಡುತ್ತಾರೆ. ಛಲವಾದಿ ನಾರಾಯಣಸ್ವಾಮಿಗೆ ಕಾರ್ಯಕ್ರಮಕ್ಕೆ ಹೋಗಲು ಅವಕಾಶ ಕೊಡಲಿಲ್ಲ. ಸತತ ಐದು ಗಂಟೆಗಳ ಕಾಲ ಛಲವಾದಿ ನಾರಾಯಣಸ್ವಾಮಿ ಅವರನ್ನು ಲಾಕ್ ಮಾಡಿದ್ದರು. ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಇದರ ಹಿಂದೆ ಇದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ಯಾರೆಲ್ಲಾ ಗೂಂಡಾಗಳು ಇದ್ದಾರೋ ಅವರ ಮೇಲೆ ದೂರು ತೆಗೆದುಕೊಳ್ಳಲು ಮನವಿ ಮಾಡಿದ್ದೇವೆ. ಕಾಂಗ್ರೆಸ್ ಗೂಂಡಾಗಳು ಐದು ಗಂಟೆಗಳ ಕಾಲ ಛಲವಾದಿ ನಾರಾಯಣಸ್ವಾಮಿ ಅವರನ್ನು ಕೂಡಿ ಹಾಕಿದ್ದರು. ಅಲ್ಲದೇ ಮುಗಿಸಿ ಹಾಕುತ್ತೇವೆ ಅಂತ ಆವಾಜ್ ಹಾಕಿದ್ದರು. ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ. ನಾರಾಯಣ ಸ್ವಾಮಿ ಮೇಲಿನ ಹಲ್ಲೆಗೆ ಪೊಲೀಸರು ಏನೂ ಮಾಡಲಿಕ್ಕಾಗದ ಸ್ಥಿತಿ ಇತ್ತು. ಅವಾಚ್ಯ ಶಬ್ಧಗಳಿಂದ ಅವರನ್ನು ಬೈದು ಅವಮಾನಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಛಲವಾದಿ ಆಡಿರುವ ಪದ ಅವಾಚ್ಯ ಅನ್ನಿಸಿದ್ದರೆ ಕೋರ್ಟಿಗೆ ಹೋಗಬೇಕಿತ್ತು. ಕಾಂಗ್ರೆಸ್ ರಾಜ್ಯದಲ್ಲಿ ಗೂಂಡಾಗಿರಿ ಮಾಡುತ್ತಿದೆ. ಇದರ ಹಿಂದೆ ಪ್ರಿಯಾಂಕ್ ಖರ್ಗೆ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.