ಕಲಬುರಗಿ: ಬಿಜೆಪಿ ಶಾಸಕ, ನಾಯಕರ ಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಸಂಚು ಹಿನ್ನೆಲೆಯಲ್ಲಿ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು, ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಕಲಬುರಗಿ ಮನೆಯೆದುರು ಭಾರೀ ಪ್ರತಿಭಟನೆಯನ್ನೂ ಬಿಜೆಪಿ ಹಮ್ಮಿಕೊಂಡಿದೆ. ಆದರೆ, ಪ್ರಿಯಾಂಕ್ ಖರ್ಗೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು, ಸಾಕ್ಷಿಗಳಿದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಕೂಡ ಪ್ರಿಯಾಂಕ್ ಖರ್ಗೆಯವರನ್ನು ಸಮರ್ಥಿಸಿಕೊಂಡಿದ್ದಾರೆ. ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು, ಕಲಬುರಗಿ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ್, ಮಣಿಕಂಠ ರಾಠೋಡ ಮತ್ತು ಆಂದೋಲಾ ಸ್ವಾಮೀಜಿ ಕೊಲೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಹಾಗೂ ಗ್ಯಾಂಗ್ ಸಂಚು ರೂಪಿಸಿತ್ತು ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಕಪನೂರ ವಿರುದ್ಧ ಕಿರುಕುಳ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಪಂಚಾಳ ಬರೆದಿಟ್ಟ ಡೆತ್ ನೋಟಲ್ಲಿ ಈ ಅಂಶ ಇದೆ ಎಂದು ಗೊತ್ತಾಗಿದೆ. ಇದು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಬಗ್ಗೆ ಚಂದು ಪಾಟೀಲ್ ದೂರು ನೀಡಿದ್ದು, ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್‌ಐಆರ್ ದಾಖಲಿಗೆ ಪೊಲೀಸರು ಶುಕ್ರವಾರ ಮೀನ ಮೇಷ ಎಣಿಸಿದ ಹಿನ್ನೆಲೆಯಲ್ಲಿ ಭಾರಿ ಹೈಡ್ರಾಮಾ ನಡೆದಿತ್ತು. ಕೋರ್ಟ್ ಆದೇಶದ ಬಳಿಕ ಎಫ್‌ಐಆರ್ ದಾಖಲಾಗಿದೆ.
ಆದರೆ ಎಫ್‌ಐಆರ್‌ನಲ್ಲಿ ಎಲ್ಲೂ ಸಚಿವ ಪ್ರಿಯಾಂಕ್ ಖರ್ಗೆ ಹೆಸರಿಲ್ಲ. ಅವರ ಆಪ್ತ ರಾಜು ಕಪನೂರ ಹೆಸರು ಮಾತ್ರ ಇದೆ. ಶನಿವಾರ ನ್ಯಾಯಾಲಯ ನೀಡಿದ ಸೂಚನೆ ಮೇರೆಗೆ, ‘ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಮಣಿಕಂಠ ರಾಠೋಡ ಹಾಗೂ ಆಂದೋಲಾ ಸ್ವಾಮೀಜಿ ಕೊಲೆಗೆ ಸಂಚು ರೂಪಿಸಲಾಗಿದೆ’ ಎಂದು ರಾಜು ಕಪನೂರ್ ಮತ್ತವರ ಗುಂಪಿನ ಸದಸ್ಯರ ವಿರುದ್ಧ ಸ್ಟೇಷನ್ ಬಜಾರ್‌ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸಚಿನ್ ಪಾಂಚಾಳ ಡೆತ್ ನೋಟಲ್ಲೇನಿದೆ?: ‘ಯೋಜನಾ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನನಗೆ ಬೀದರ್ ಜಿಲ್ಲೆಯ ದುಬಲಗುಂಡಿ ಮೂಲದ ಸತೀಶ ರತ್ನಾಕರ್ ಎಂಬುವವರಿಂದ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಪರಿಚಯವಾಗಿತ್ತು. ಯುನಿಟಿ ಬಿಲ್ಡರ್ಸ್ ಹಾಕಿದ್ದ 12 ಕೋಟಿ ರು.ಗಳ ಟೆಂಡರ್ ಹಾಗೂ ಕಲುಬರಗಿ ಏರಪೋರ್ಟ್‌ನ ಸುಮಾರು 28 ಕೋಟಿ ರು. ಗಳ ಕಾಮಗಾರಿ ಅಲ್ಲದೆ ಕಲಬುರಗಿ ಮೃಗಾಲಯದ ಕಾಮಗಾರಿಯಲ್ಲೂ ಹಣ ಪಡೆದು ಮೋಸ ಮಾಡಲಾಗಿತ್ತು. ಕಾಮಗಾರಿಯೊಂದರ ಸಂಬಂಧ ರಾಜು ಕಪನೂರ್ ಶೇ. 5ರ ಲಂಚದ ಬೇಡಿಕೆ ಇಟ್ಟಿದ್ದರು. ಆ ಪ್ರಕಾರ 10 ಲಕ್ಷ ರು. ಮುಂಗಡ ತಲುಪಿಸಲಾಗಿತ್ತು.
ನಮ್ಮ ಕಂಪನಿಯಿಂದ ಕೈಗೆತ್ತಿಕೊಳ್ಳಲಾಗಿದ್ದ ಕಲಬುರಗಿ ಮತ್ತು ಬೀದರ್ ಜಿಪಂನ 2 ಕೋಟಿ ರು.ಗಳ ಕಾಮಗಾರಿಗಳಿಗೂ 10 ಲಕ್ಷ ರು. ಬೇಡಿಕೆಯಿಟ್ಟಿದ್ದರು. ಅದರಂತೆ ಅವರ ಪತ್ನಿ ಖಾತೆಗೆ 5 ಲಕ್ಷ ರು. ಹಣ ವರ್ಗಾಯಿಸಿದ್ದೆ. ಆದರೆ ಬಾಕಿ 5 ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ್ದ. ಈ ಸಂಬಂಧ ನನಗೆ ಅವರಿಂದ ಬೆದರಿಕೆ ಬಂದಿತ್ತು. ನನಗಷ್ಟೇ ಅಲ್ಲ, ಶಾಸಕ ಬಸವರಾಜ ಮತ್ತಿಮಡು, ಚಂದು ಪಾಟೀಲ್, ಮಣಿಕಂಠ ರಾಠೋಡ್, ಆಂದೋಲಾ ಸ್ವಾಮೀಜಿಗೆ ಕಪನೂರ್‌ನಿಂದ ಕೊಲೆ ಬೆದರಿಕೆ ಇತ್ತು’ ಎಂದು ಸಚಿನ್ ಡೆತ್‌ನೋಟಲ್ಲಿದೆ. ‘ಹತ್ಯೆ ಸ್ಕೆಚ್ ಹಿಂದೆ ಯಾರಿದ್ದಾರೆ? ಯಾರು ಯಾರಿಗೆ ಸುಪಾರಿ ಕೊಟ್ಟಿದ್ದಾರೆ? ಎಲ್ಲವೂ ಬಯಲಿಗೆ ಬರಬೇಕಾದರೆ ಸಿಬಿಐ ತನಿಖೆಯಾಗಬೇಕು. ಠಾಣೆಯಲ್ಲಿ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿರುವ ಇನ್‌ಸೆಕ್ಟರ್ ಶಕೀಲ್ ಅಂಗಡಿ ಸಸ್ಪೆಂಡ್ ಮಾಡಬೇಕು ಎಂದು ಶಾಸಕ ಬಸವರಾಜ್ ಮತ್ತಿಮಡು ಆಗ್ರಹಿಸಿದ್ದಾರೆ.