ನವದೆಹಲಿ : ಬಿಜೆಪಿ ನೇತೃತ್ವದ ದೆಹಲಿ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಂಪರೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ದಲಿತ ವಿದ್ಯಾರ್ಥಿಗಳಿಗೆ ನೀಡಿದ ಪ್ರಮುಖ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಎಎಪಿ ದೆಹಲಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್ ತಿಳಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ, ಸಚಿವರು ಮತ್ತು ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹೊಂದಿರುವುದು ಕಡ್ಡಾಯವಾಗಿತ್ತು. ಆದರೆ, ಬಿಜೆಪಿ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿನ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ತೆಗೆದು ಹಾಕಿದೆ ಎಂದಿದ್ದಾರೆ.
ವಿದ್ಯಾರ್ಥಿ ವೇತನ ಮತ್ತು ಆರ್ಥಿಕ ಅನುದಾನ ಸೇರಿದಂತೆ ಪರಿಶಿಷ್ಟ ಜಾತಿ (ಎಸ್‌ಸಿ) ವಿದ್ಯಾರ್ಥಿಗಳಿಗೆ ನೀಡಿದ್ದ ಹಲವು ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಎಲ್ಲಾ ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ಮತ್ತು ಮಾಸಿಕ ಗೌರವ ಧನ ನೀಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ, ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಎಂದು ಹೇಳಿದ್ದಾರೆ.
ದೆಹಲಿ ಸಿಎಂ ರೇಖಾ ಗುಪ್ತಾ ಅವರ ಪತಿ ಅವರ ಪರವಾಗಿ ಅಧಿಕೃತ ಸಭೆಗಳನ್ನು ನಡೆಸುತ್ತಿದ್ದಾರೆ. ಇದು ಅಂಬೇಡ್ಕರ್ ಅವರು ರೂಪಿಸಿದ “ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ” ಎಂದು ಅವರು ಆರೋಪಿಸಿದರು.
ಇನ್ನು ಎಎಪಿ ಮಾಡಿದ ಆರೋಪಗಳು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್, ಚರ್ಚೆಗಳ ಸಮಯದಲ್ಲಿ ಕುಟುಂಬ ಸದಸ್ಯರು ಉಪಸ್ಥಿತರಿರುವುದು ಕಾನೂನುಬಾಹಿರವಲ್ಲ ಎಂದು ತಿಳಿಸಿದ್ದಾರೆ.