ನವದೆಹಲಿ : ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಈಗಾಗಲೇ ಚುನಾವಣಾ ಪ್ರಚಾರ ಪ್ರಾರಂಭಿಸಿವೆ. ಇಂದು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇಂದು ಪ್ರಣಾಳಿಕೆಯ ಬಿಡುಗಡೆ ಮಾಡಿದ್ದಾರೆ. ದೆಹಲಿಯ ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು 2,500ರೂ. ನೆರವು, 500ರೂ. ಗೆ ಎಲ್ಪಿಜಿ ಸಿಲಿಂಡರ್ ಹಾಗೂ ಹಿರಿಯ ನಾಗರಿಕರಿಗೆ ಮಾಸಿಕ 2,500ರೂ. ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಗರ್ಭಿಣಿಯರಿಗೆ 21,000 ರೂ. ಮತ್ತು 6 ತಿಂಗಳು ಪೌಷ್ಠಿಕಾಂಶ ಪದಾರ್ಥಗಳ ಕಿಟ್ಗಳನ್ನು ನೀಡಲಾಗುವುದು. ಜೊತೆಗೆ ಮೊದಲ ಮಗುವಿಗೆ 5,000 ರೂ. ಮತ್ತು ಎರಡನೇ ಮಗುವಿಗೆ 6,000 ರೂ. ನೀಡಲಾಗುವುದು. ಬಿಜೆಪಿ ಅಧಿಕಾರಕ್ಕೆ ಬಂದರೆ, ಮೊದಲ ಸಂಪುಟ ಸಭೆಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಗೆ ಒಪ್ಪಿಗೆ ನೀಡಲಾಗುವುದು ಜೊತೆಗೆ ಹೆಚ್ಚುವರಿಯಾಗಿ ಆರೋಗ್ಯ ರಕ್ಷಣೆಗಾಗಿ 5 ಲಕ್ಷ ರೂ. ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.
ಬಡ ಮಹಿಳೆಯರಿಗೆ 500ರೂ. ಗೆ ಎಲ್ಪಿಜಿ ಸಿಲಿಂಡರ್ ನೀಡಲಾಗುವುದು. ಹೋಳಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಒಂದು ಉಚಿತ ಸಿಲಿಂಡರ್ ನೀಡಲಾಗುವುದು. ಇನ್ನು, 60-70ರ ವಯೋಮಾನದವರಿಗೆ ಮಾಸಿಕ 2,500ರೂ. ಹಾಗೂ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತಿಂಗಳಿಗೆ 3,000ರೂ. ನೆರವು ನೀಡಲಾಗುವುದು ಎಂದು ಘೋಷಿಸಿದೆ. ಇದರೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಈಗಿರುವ ಎಲ್ಲಾ ಸಮಾಜ ಕಲ್ಯಾಣ ಯೋಜನೆಗಳು ಮುಂದುವರಿಯಲಿವೆ ಎಂದರು.