ಬೆಂಗಳೂರು: ಕರ್ನಾಟಕದಲ್ಲಿ ಇದೀಗ ಬೆಲೆ ಏರಿಕೆಗೆ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಜನರ ಆಕ್ರೋಶವನ್ನೇ ತಮ್ಮ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ಹೋರಾಟಕ್ಕೆ ಇಳಿದಿದೆ. ಹಾಲು, ಮೊಸರು, ವಿದ್ಯುತ್, ಟೋಲ್ ದರ ಮತ್ತು ಡೀಸೆಲ್ ಬೆಲೆ ಕೂಡ ಹೆಚ್ಚಳ ಮಾಡಲಾಗಿದೆ. ಇದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ಆರೋಪ ಪಟ್ಟಿ ಬಿಡುಗಡೆ ಮಾಡಿದೆ.
ಎರಡು ವರ್ಷದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ಮತ್ತು ಮಧ್ಯಮ ವರ್ಗದವರ ಮೇಲೆ ಬೆಲೆಯೇರಿಕೆಯ ಗದಾಪ್ರಹಾರ ನಿರಂತರವಾಗಿ ಮಾಡುತ್ತಿದೆ. ಬಡವರಿಗೆ ಗ್ಯಾರಂಟಿ ಯೋಜನೆ ನೀಡಿ ಆರ್ಥಿಕವಾಗಿ ಸದೃಢ ಮಾಡಿದ್ದೇವೆ ಎಂದು ಪದೇ ಪದೇ ಬಡಾಯಿ ಕೊಟ್ಟಿಕೊಳ್ಳುವ ಸರ್ಕಾರ ಕಳೆದ ಎರಡು ವರ್ಷದಲ್ಲಿ 50 ವಸ್ತುಗಳ ಬೆಲೆಯನ್ನು ಹೆಚ್ಚಿಸಿ ಒಂದು ಕೈಯಲ್ಲಿ ಹಣ ಕೊಟ್ಟು ಇನ್ನೊಂದು ಕೈಯಲ್ಲಿ ಬಡ್ಡಿ ಸಮೇತ ಕಿತ್ತುಕೊಳ್ಳುತ್ತಿದೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಸಂಪನ್ಮೂಲ ಕ್ರೋಢಿಕರಣಕ್ಕೆ ಕಂಡ ಕಂಡ ವಸ್ತುಗಳ ಬೆಲೆಗಳ ಏರಿಕೆ ಮಾಡಿ ಜನಸಾಮಾನ್ಯರ ಬವಣೆಗೆ ಕಿಂಚಿತ್ತೂ ಕಾಳಜಿ ತೋರದ ನಿರ್ದಯಿ ಸರ್ಕಾರವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಬೆಲೆಯೇರಿಕೆಯ ಪರ್ವ ಈ ಸರ್ಕಾರ ಅಧಿಕಾರಕ್ಕೆ ಬಂದ ವರ್ಷದಿಂದಲೇ ಆರಂಭಿಸಿದರು. ಆದಾಯ ಮೂಲವಿಲ್ಲದೆ ಪರದಾಡುವಂತಾಗಿರುವ ಸರ್ಕಾರ ಜನರ ಸುಲಿಗೆಗೆ ಡೊಂಕ ಕಟ್ಟಿ ನಿಂತಿದೆ. ಹುಟ್ಟಿನಿಂದ ಸಾವಿನವರೆಗೂ ಬೆಲೆಯೇರಿಕೆ ಮಾಡಿರುವ ಅಪಕೀರ್ತಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕಿಡಿಕಾರಿದ್ದಾರೆ.
ಹಣಕಾಸು ಇಲಾಖೆ
ಜೂನ್ 24 ರಂದು ಪೆಟ್ರೋಲ್ 3ರೂ ಮತ್ತು ಡೀಸೆಲ್ಗೆ ರೂ 3.50 ಪೈಸೆ ಪ್ರತಿ ಲೀಟರ್ಗೆ ಬೆಲೆ ಏರಿಕೆ ಮಾಡಿದರು. ಬಿಜೆಪಿ ಆಡಳಿತವಿರುವ ಗುಜರಾತ್ ಯುಪಿ ಗೋವಾ ಮುಂತಾದ ಸರ್ಕಾರಗಳು ಇಂಧನ ಬೆಲೆ ಇಳಿಸಿದ್ದರೆ ನಮ್ಮ ರಾಜ್ಯದಲ್ಲಿ ಇಂಧನ ಬೆಲೆಯು ಗಗನಕ್ಕೇರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಸರ್ಕಾರ ಆದಾಯ ಹೆಚ್ಚಳ ಮಾಡಲು ಎಷ್ಟು ಬರಗೆಟ್ಟಿದೆಯೆಂದರೆ ಬಡ ರೋಗಿಗಳು ಚಿಕಿತ್ಸೆಗೆ ಬರುವ ಸರ್ಕಾರಿ ಆಸ್ಪತ್ರೆಯನ್ನು ಸುಲಿಗೆ ಕೇಂದ್ರವನ್ನಾಗಿ ಮಾಡಿಕೊಂಡಿದೆ. ಉಚಿತ ಚಿಕಿತ್ಸೆ ನೀಡಬೇಕಾದ ಸರ್ಕಾರ ಬಡವರ ಹಣವನ್ನು ತನ್ನ ಆದಾಯ ಹೆಚ್ಚಳದ ಮೂಲವಾಗಿ ಕಾಣುತ್ತಿರುವುದು ಸರ್ಕಾರದ ಬಡ ಜನರ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದಿದೆ.
ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಹಿಡಿ ಮತ್ತು ಐಹಿಡಿ ಶುಲ್ಕವನ್ನು ಶೇ.10-30ರಷ್ಟು ಹೆಚ್ಚಿಸಿದೆ. ನವೀಕರಿಸಿದ ಶುಲ್ಕಗಳು ಬಡವರಿಗೆ ಹೊರೆಯಲ್ಲ ಎಂದು ಆರೋಗ್ಯ ಸಚಿವರು ವಾದಿಸುವ ಮೂಲಕ ತಮ್ಮ ಭಂಡತನ ಪ್ರದರ್ಶನ ಮಾಡಿದ್ದಾರೆ ಎಂದರು.
ಕಂದಾಯ ಇಲಾಖೆ
ಜನನ, ಮರಣ ಪ್ರಮಾಣ ಪತ್ರದ ದರವನ್ನು ಶೇಕಡಾ 100ರಷ್ಟು ಹೆಚ್ಚಿಸಿದ್ದಾರೆ. ಈಗ ಮನೆಯಲ್ಲಿ ಸಂಗ್ರಹವಾಗುವ ಕಸದ ಮೇಲೂ ನೂರಾರು ರೂಪಾಯಿ ಸೆಸ್ ವಿಧಿಸಲಾಗಿದೆ. ಕಸದಲ್ಲೂ ಆದಾಯ ಗಳಿಸಲು ಮುಂದಾಗಿರುವ ಬರೆಗೆಟ್ಟ ಸರ್ಕಾರವಿದು.ದೌರ್ಭಾಗ್ಯವೆಂದರೆ ತಮ್ಮ ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳಲು ರೈತ ಸಮುದಾಯವನ್ನು ಗುರಾಣಿಯ ಹಾಗೆ ಬಳಸಿಕೊಳ್ಳುತ್ತಿರುವುದು ಶೋಚನೀಯ.
ಸರ್ಕಾರ ಹೆಚ್ಚಳ ಮಾಡಿರುವ ದರವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂಬ ದಾರಿ ತಪ್ಪಿಸುವ ಮಾತನ್ನು ಆಡುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಹಾಲು ದರವನ್ನು ಹೆಚ್ಚಳ ಮಾಡಿದಾಗಲೂ ಹಣವನ್ನು ರೈತರಿಗೆ ನೀಡುತ್ತೇವೆ ಎಂದು ಹೇಳಿದರೆ ವಿನಹ ಹಣವನ್ನು ವರ್ಗ ಮಾಡಲೇ ಇಲ್ಲ.ಸ್ಟಾಂಪ್ ಡ್ಯೂಟಿ ದರವನ್ನು 4 ಪಟ್ಟು ಹೆಚ್ಚಳ ಮಾಡಿದ್ದಾರೆ. ಈಗ ಭೂ ಪತ್ರ ಪಡೆಯಲು ದುಪ್ಪಟ್ಟು ಹಣ ಪಾವತಿಸುವ ಅನಿವಾರ್ಯತೆಯಾಗಿದೆ. ಬಡ ರೈತರಿಗೆ ಇದು ದೊಡ್ಡ ಹೊಡತವಾಗಿದೆ.
ಕೃಷಿ ಭೂಮಿ ಮಾರ್ಗಸೂಚಿ ಮೌಲ್ಯವು ಶೇಕಡಾ 50ರಷ್ಟು ಏರಿಕೆಯಾಗಿದ್ದರೆ, ನಿವೇಶನಗಳ ಹೆಚ್ಚಳವು ಶೇಕಡಾ 30ರಷ್ಟು ಹೆಚ್ಚಾಗಿದೆ. ಹಾಗೆಯೇ ಅಪಾರ್ಟ್ ಮೆಂಟ್ ಮಾರ್ಗಸೂಚಿ ಮೌಲ್ಯವನ್ನು ಶೇಕಡಾ 5 ರಿಂದ ಶೇಕಡಾ 20 ರಷ್ಟು ಏರಿಕೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಇ೦ಧನ ಇಲಾಖೆ
ವಿದ್ಯುತ್ ದರವನ್ನು ಹೆಚ್ಚಳ ಮಾಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮಾರಣಾಂತಿಕ ಪೆಟ್ಟನ್ನು ನೀಡಿದ್ದಾರೆ.ವಿದ್ಯುತ್ ಇಲಾಖೆಯ ನೌಕರರಿಗೆ ಪಿಂಚಣಿ ಕೊಡಲು ಹಣವಿಲ್ಲದೆ ದಿವಾಳಿಯಾಗಿರುವ ಸರ್ಕಾರ ವಿದ್ಯುತ್ ಗ್ರಾಹಕರಿಂದ ಯೂನಿಟ್ ಗೆ 0.35 ಪೈಸೆ ಹೆಚ್ಚಳ ಮಾಡಿ ಜನರ ಸುಲಿಗೆ ಮಾಡುತ್ತಿದೆ.
ಕೃಷಿ ಇಲಾಖೆ
ರೈತರಿಗೆ ಅತ್ಯಾವಶ್ಯಕವಾಗಿ ಬೇಕಾದ ಬಿತ್ತನೆ ಬೀಜದ ಬೆಲೆಯಲ್ಲಿ ಶೇಕಡಾ 50 ರಿಂದ 100 ರಷ್ಟು ಏರಿಕೆಯಾಗಿದೆ.ರೈತರು ತಮ್ಮ ಜಮೀನಿನಲ್ಲಿ ಟ್ರಾನ್ಸಫಾರ್ಮರ್ ಅಳವಡಿಸುವ ಶುಲ್ಕವನ್ನು ₹25,000 ದಿಂದ 2,50,000 ದಿಂದ 13,00,000 ಕ್ಕೆ ಹೆಚ್ಚಳ ಮಾಡಿ ರೈತರ ತಲೆಯ ಮೇಲೆ ಹೊರಲಾರ ಹೊರೆ ಹೊರೆಸಿದ್ದಾರೆ.
ಸಾರಿಗೆ ಇಲಾಖೆ
ಸಾರಿಗೆ ಬಸ್ ದರವನ್ನು ಶೇಕಡಾ 15 ರಿಂದ 20 ರಷ್ಟು ಹೆಚ್ಚಳವನ್ನು ಮಾಡಲಾಗಿದೆ. ಸಾರಿಗೆ ಸಂಸ್ಥೆಯು ಸಂಬಳ ನೀಡಲು ಪರದಾಡುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ.ಬೆಂಗಳೂರು ಮೆಟ್ರೊ ಪ್ರಯಾಣ ದರವು ಶೇಕಡಾ 100 ರಷ್ಟು ಹೆಚ್ಚಳ ಮಾಡಿ ದೇಶದಲ್ಲೆ ಹೊಸ ಇತಿಹಾಸ ಬರೆದ ಅಪಕೀರ್ತಿ ಸರ್ಕಾರಕ್ಕೆ ಸಲ್ಲುತ್ತದೆ.ವಿದ್ಯುತ್ ಕಾರು ಖರೀದಿಯನ್ನು ಉತ್ತೇಜಿಸುವ ಬದಲು ಶೇಕಡಾ 10ರಷ್ಟು ಜೀವಿತಾವಧಿ ತೆರಿಗೆಯನ್ನು ಹೆಚ್ಚಳ ಮಾಡಿದ್ದಾರೆ. ಹೊಸ ವಾಹನ ಖರೀದಿ ಮಾಡಿದಾಗ 500 ರಿಂದ 1000 ವರಗೆ ಸೆಸ್ ವಿಧಿಸಲಾಗಿದೆ ಎಂದಿದ್ದಾರೆ.
ಜನರ ಸಂಕಷ್ಟಕ್ಕೆ ಕವಡೆ ಕಿಮ್ಮತ್ತು ನೀಡದೆ ತನ್ನ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಜನರ ಹಗಲು ದರೋಡೆಗೆ ಸರ್ಕಾರ ಇಳಿದಿರುವುದನ್ನು ಬಿಜೆಪಿ ಖಂಡಿಸುತ್ತದೆ. ಬೆಲೆಯೇರಿಕೆಯನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿದೆ.