ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅಪರಿಚಿತರು ಮೊಟ್ಟೆ ದಾಳಿ ನಡೆಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಇಂದು ಲಕ್ಷ್ಮೀ ದೇವಿನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಮುಗಿಸಿ ಕಾರ್ಯಕರ್ತರೊಂದಿಗೆ ಹೊರಬರುವಾಗ ಅಪರಿಚಿತರು ಮೊಟ್ಟೆ ಎಸೆದಿದ್ದಾರೆ. ಘಟನೆಯಾಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ರಕ್ಷಣೆ ಮಾಡಿದ್ದಾರೆ. ದುರ್ಘಟನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು. ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಮುನಿರತ್ನ ‘ಇಂದು ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಹಿನ್ನೆಲೆ ಕಾರ್ಯಕ್ರಮಕ್ಕಾಗಿ ಬಂದಿದ್ದೆ.
ಮುಗಿಸಿ ಹೋಗುವಾಗ ದುಷ್ಕರ್ಮಿಗಳು ನನ್ನ ಮೇಲೆ ಮೊಟ್ಟೆ ದಾಳಿ ನಡೆಸಿದ್ದಾರೆ. ಇದಕ್ಕೂ ಮುನ್ನ ಗುಪ್ತ ವರದಿ ಪ್ರಕಾರ ನಿಮ್ಮ ಮೇಲೆ ಕೊಲೆಯತ್ನ ದಾಳಿ ನಡೆಯಲಿದೆ. ಹೀಗಾಗಿ ಕಾರಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ್ದರು. ಪೊಲೀಸರ ನಿರ್ದೇಶನದಂತೆ ಹೊರಬರುವಾಗ ಈ ಘಟನೆ ಸಂಭವಿಸಿದೆ’ ಎಂದರು. ಮೂರು ತಿಂಗಳ ಹಿಂದೆ ವಕೀಲರ ರೂಪದಲ್ಲಿ ಬಂದ ಅಪರಿಚಿತರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.
ಅಲ್ಲದೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ನನ್ನ ಮೇಲೆ ಹಲ್ಲೆ ಯತ್ನ ನಡೆದಿತ್ತು. ಈ ಬಗ್ಗೆ ರಾಷ್ಟ್ರಪತಿ, ಪ್ರಧಾನಿಮಂತ್ರಿ ಹಾಗೂ ಎಎನ್ಐ ದೂರು ನೀಡಿದ್ದೇನೆ. ನನ್ನನ್ನ ಹತ್ಯೆ ಮಾಡಲು ಸಂಚು ರೂಪಿಸಿರುವುದು ಗೊತ್ತಾಗಿದೆ. ಡಿ.ಕೆ.ಸುರೇಶ್, ಆರ್.ಆರ್.ನಗರದ ಪರಾಜಿತ ಆಭ್ಯರ್ಥಿ ಕುಸುಮಾ ಈಕೆಯ ತಂದೆ ಹನುಮಂತರಾಯಪ್ಪ ಅವರೇ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಮೂವರನ್ನ ಬಂಧಿಸಿರುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.