ಬೆಂಗಳೂರು: ಬಿಜೆಪಿಯ 18 ಶಾಸಕರ ಅಮಾನತು ಆದೇಶ ಹಿಂಪಡೆಯಲು (Revoking Suspension) ಚಿಂತನೆ ನಡೆದಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷವಿರಲಿ ಸಂವಿಧಾನ ಪೀಠಕ್ಕೆ ಗೌರವ ನೀಡಬೇಕು. ಪೀಠಕ್ಕೆ ಆಗೌರವ ನೀಡಿದ ಹಿನ್ನೆಲೆಯಲ್ಲಿ ಶಾಸಕರನ್ನು ಅಮಾನತುಗೊಳಿಸಲಾಗಿತ್ತು. ಅಮಾನತಾದ ಶಾಸಕರೂ ನಮ್ಮವರೇ. ಹಾಗಾಗಿ ಎಲ್ಲರೂ ಸೇರಿ ವಿಚಾರವನ್ನು ಇತ್ಯರ್ಥಗೊಳಿಸುತ್ತೇವೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಶಾಸಕರು, ಪ್ರತಿಪಕ್ಷದ ನಾಯಕರು ಹಾಗೂ ಬಹಳಷ್ಟು ನಾಯಕರು ಚರ್ಚೆಯ ಸಂದರ್ಭದಲ್ಲಿ ಏನೋ ಹೆಚ್ಚು ಕಮ್ಮಿಯಾಗಿದೆ. ಅಮಾನತು ಆದೇಶವನ್ನು ಹಿಂಪಡೆಯಿರಿ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ ಆಮಾನತನ್ನು ಹಿಂಪಡೆಯಲು ಆಲೋಚನೆ ನಡೆದಿದ್ದು, ಅದರಂತೆ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ.ಪಾಟೀಲ್, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಇತರರ ಜತೆ ಇಂದು ಸಂಜೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸಚಿವ ಸಂಪುಟ ಸಭೆಯಿಂದ ಶಾಸಕರ ಅಮಾನತು ಆದೇಶ ಹಿಂಪಡೆಯುವ ಬಗ್ಗೆ ಸಲಹೆ ಪಡೆದಿರುವ ಬಗ್ಗೆ ಪ್ರತಿಕ್ರಯಿಸಿದ ಸ್ಪೀಕರ್, ಅಂದು ಗದ್ದಲವಾದಾಗ ತಾವು ಕಲಾಪದಲ್ಲಿ ಅದನ್ನು ಪ್ರಸ್ತಾಪಿಸಿದ್ದು, ಅದನ್ನು ಬಹುಮತದಿಂದ ಶಾಸಕಾಂಗ ನಿರ್ಣಯ ಅಂಗೀಕರಿಸಿದೆ. ಆ ರೀತಿ ತೆಗೆದುಕೊಂಡ ನಿರ್ಣಯವನ್ನು ವಿಧಾನಸಭಾಧ್ಯಕ್ಷರು ಏಕಮುಖವಾಗಿ ಹಿಂಪಡೆಯುವುದು ಸೂಕ್ತವಲ್ಲ. ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಆದರೆ ಹೇಗೆ ಹಿಂಪಡೆಯಬೇಕು ಎಂಬುದಕ್ಕೆ ಸರ್ಕಾರ ಮತ್ತು ಪ್ರತಿಪಕ್ಷದ ಸಹಕಾರ ಅಗತ್ಯ. ಈ ಹಿನ್ನೆಲೆಯಲ್ಲಿ ಸಂಪುಟದ ಅಭಿಪ್ರಾಯ ಸಂಗ್ರಹಿಸಿದ್ದಾಗಿ ತಿಳಿಸಿದರು.
ಯಾವುದೋ ಸಂದರ್ಭದಲ್ಲಿ ಹೆಚ್ಚುಕಡಿಮೆಯಾಗುತ್ತದೆ. ಆರು ತಿಂಗಳ ಕಾಲ 18 ಮಂದಿ ಶಾಸಕರನ್ನು ಅಮಾನತುಗೊಳಿಸಲಾಗಿತ್ತು. ಅದರಲ್ಲಿ ಈಗಾಗಲೇ ಎರಡು ತಿಂಗಳು ಮುಗಿದಿದೆ. ಈ ದೇಶದಲ್ಲಿ ಎಂಥವರಿಗೂ ಕ್ಷಮೆಯಿದೆ. ಶಾಸಕರು ನಮ್ಮವರೇ. ಹಾಗಾಗಿ ಎಲ್ಲರೂ ಸೇರಿ ವಿಚಾರವನ್ನು ಇತ್ಯರ್ಥಗೊಳಿಸುತ್ತೇವೆ ಎಂದರು.
ಈ ಬಗ್ಗೆ ಕಾನೂನು ಸಚಿವ ಎಚ್.ಕೆ ಪಾಟೀಲ್ ಮಾತನಾಡಿ, ಅಮಾನತು ಆಗಿರುವ ಶಾಸಕರ ವಿಚಾರವಾಗಿ ಇಂದು ಸಂಜೆ ಸ್ಪೀಕರ್ ಕಚೇರಿಯಲ್ಲಿ ಸಭೆ ಸೇರುತ್ತಿದ್ದೇವೆ. ಸಿಎಂ, ಡಿಸಿಎಂ, ನಾನು, ವಿಪಕ್ಷ ನಾಯಕರ ಜತೆ ಸಭೆ ನಡೆಯಲಿದೆ. ಕ್ಯಾಬಿನೆಟ್ ಸಭೆಯಲ್ಲಿ ಕೂಡ ವಿಚಾರ ಚರ್ಚೆಯಾಗಿದೆ. ಆ ಅಧಿಕಾರದ ಹಿನ್ನೆಲೆಯಲ್ಲಿ ನಾವು ತೀರ್ಮಾನ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಮುಜರಾಯಿ ಇಲಾಖೆಯ ಬಿಲ್ ರಾಷ್ಟ್ರಪತಿ ಪರಾಮರ್ಶೆಗೆ ಕಳುಹಿಸಿದ ವಿಚಾರದ ಬಗ್ಗೆ ಮಾತನಾಡಿ, ರಾಷ್ಟ್ರಪತಿಗೆ ಕಳುಹಿಸುವ ಬಗ್ಗೆ ತೀರ್ಮಾನ ಮಾಡಿದ್ದಾರೆ. ಸೋಮವಾರ ಈ ಬಗ್ಗೆ ಏನು ಮಾಡಬೇಕು ಅಂತ ಚರ್ಚೆ ಮಾಡಲಿದ್ದೇವೆ. ವಿವಿಧ ಇಲಾಖೆಗಳ ಅಧಿಕಾರಿಗಳನ್ನ ಸಭೆಗೆ ಕರೆದಿದ್ದೇವೆ. ಅದೇ ಸಂಧರ್ಭದಲ್ಲಿ ಸಂಬಂಧಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರ ಜತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಇದು ಬಹಳಷ್ಟು ಚರ್ಚೆ ಮಾಡಬೇಕಾದ ವಿಚಾರ. ಹಾಗಾಗಿ ಇದರ ಬಗ್ಗೆ ಏನನ್ನೂ ಹೇಳೋದಿಲ್ಲ. ಅನೇಕ ಬಿಲ್ ಪಾಸ್ ಆಗಿ ಬಂದಿವೆ. ಈಗ ಆ ರೀತಿ ವಿರೋಧಿಸೋದು ಏನೂ ಇಲ್ಲ ಎಂದು ತಿಳಿಸಿದರು.
 
				 
         
         
         
															 
                     
                     
                    


































 
    
    
        