ನವದೆಹಲಿ: ಕಾಂಗ್ರೆಸ್ ತನ್ನ ಪದಾಧಿಕಾರಿಗಳಲ್ಲಿ ಪ್ರಮುಖ ಬದಲಾವಣೆ ಮಾಡಿದೆ, ಹಲವು ರಾಜ್ಯಗಳ ಉಸ್ತುವಾರಿ ಬದಲಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶ ಹೊರಡಿಸಿದ್ದಾರೆ.
ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಅವರನ್ನು ಜಮ್ಮು ಮತ್ರು ಕಾಶ್ಮೀರದ ಪ್ರಧಾನ ಕಾರ್ಯದರ್ಶಿಯಾಗಿಎಐಸಿಸಿ ಶನಿವಾರ ನೇಮಿಸಿದೆ. ಹರಿಯಾಣ ರಾಜ್ಯದ ಪಕ್ಷದ ಉಸ್ತುವಾರಿಯಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಿಸಲಾಗಿದೆ.
ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಪಕ್ಷದ ಸಂಘಟನೆಯ ಪುನರ್ ರಚನೆ ಪ್ರಕ್ರಿಯೆಗೆ ಪಕ್ಷ ಚಾಲನೆ ನೀಡಿದೆ. ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೂ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಹರಿಪ್ರಸಾದ್ ಅವರು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿದ್ದು ಹಲವು ರಾಜ್ಯಗಳ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಮೂರು ವರ್ಷಗಳ ಹಿಂದೆ ರಾಜ್ಯ ರಾಜಕಾರಣಕ್ಕೆ ಬಂದಿದ್ದರು. ರಾಷ್ಟ್ರ ರಾಜಕಾರಣದಲ್ಲಿ ಅವರ ಅನುಭವವನ್ನು ಮತ್ತೆ ಬಳಸಿಕೊಳ್ಳಲು ಪಕ್ಷ ತೀರ್ಮಾನಿಸಿದೆ.
ಕೃಷ್ಣ ಅಲ್ಲಾವರು ಅವರನ್ನು ಬಿಹಾರ, ಹಿಮಾಚಲ ಪ್ರದೇಶ ಮತ್ತು ಚಂಡೀಗಢಕ್ಕೆ ರಜನಿ ಪಾಟೀಲ್, ಮಧ್ಯಪ್ರದೇಶಕ್ಕೆ ಹರೀಶ್ ಚೌಧರಿ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ. ಮುಂದಿನ ವರ್ಷ ಬಿಹಾರ ಚುನಾವಣೆ ನಡೆಯಲಿದೆ.
ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಲಲ್ಲು ಅವರನ್ನು ಒಡಿಶಾ, ಕೆ. ರಾಜು ಅವರನ್ನು ಜಾರ್ಖಂಡ್, ಮೀನಾಕ್ಷಿ ನಟರಾಜನ್ ಅವರನ್ನು ತೆಲಂಗಾಣ ಮತ್ತು ಗಿರೀಶ್ ಚೋಡಂಕರ್ ಅವರನ್ನು ತಮಿಳುನಾಡು ಮತ್ತು ಪುದುಚೇರಿಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.