ಕಾರವಾರ : ದಾಂಡೇಲಿಯ ಲೆನಿನ್ ರಸ್ತೆಯಲ್ಲಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ ವ್ಯಕ್ತಿಯನ್ನು ಹುಬ್ಬಳ್ಳಿ ಮೂಲದ ನಕಲಿ ಪತ್ರಕರ್ತರು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿಗೆ ಬೇಡಿಕೆ ಇಟ್ಟ ಘಟನೆಗೆ ಸoಬಂಧಿಸಿದಂತೆ ಮೂವರನ್ನು ದಾಂಡೇಲಿ ಪೋಲಿಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಹುಬ್ಬಳ್ಳಿಯ ವಿಜಯಶಂಕರ ಮೇತ್ರಾಣಿ , ಧರ್ಮರಾಜ ನಾರಾಯಣ ಕಠಾರೆ, ಸತೀಶ ಭಾಗವನ್ ಕೇದಾರಿ ಹಣದ ಬೇಡಿಕೆಯಿಟ್ಟ ಆರೋಪಿತರಾಗಿದ್ದಾರೆ.
ಆರೋಪಿತರು ಲೆನಿನ್ ರಸ್ತೆಯ ಅಶೋಕ ಶಂಬು ಪರಬ್ ಎನ್ನುವವರ ಕ್ಲಿನಿಕ್ ಗೆ ಬಂದು ನೀನು ನಕಲಿ ವೈದ್ಯನಿದ್ದು ನಿನ್ನ ಮೇಲೆ ಸಾಕಷ್ಟು ದೂರುಗಳಿವೆ. ನಾವು ವಿಜಯ – 9 ಎನ್ನುವ ಯು ಟ್ಯೂಬ್ ಚಾನಲ್ ನವರಿದ್ದು, ಈಗ ಚಿಕ್ಕದಾಗಿ ವರದಿ ಮಾಡಿದ್ದೆವೆ. ಉಳಿದ ದೊಡ್ದ ದೊಡ್ಡ ಚಾನಲ್ ಗಳ ಮೂಲಕ ಸುದ್ಧಿ ಪ್ರಸಾರ ಮಾಡಿಸುತ್ತೇವೆ. ಡಿಎಚ್ ಒ ಗೆ ಮಾಹಿತಿ ನೀಡಿ ಕ್ಲಿನಿಕ್ ಬಂದ್ ಮಾಡಿಸುವೆವು. ನಕಲಿ ವೈದ್ಯ ವೃತ್ತಿ ಮಾಡುತ್ತಿರುವ ನಿನ್ನ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಹೆದರಿಸಿದ್ದಾರೆ. ನಂತರ 2.5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟರೆನ್ನಲಾಗಿದೆ. ಈ ಹಿನ್ನಲೆಯಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದ ಅಶೋಕ ಪರಬ ಭಾನುವಾರ ಸಂಜೆ ಪೋಲಿಸರಿಗೆ ದೂರು ನೀಡಿದ್ದಾರೆ.
ಹಣ ಸ್ವೀಕರಿಸಲು ಬಂದ ಮೂವರನ್ನು ಪೋಲಿಸರು ಇಂದು ಬಂಧಿಸಿದ್ದಾರೆ. ನಗರ ಠಾಣೆಯ ಪಿ.ಎಸ್.ಐ.ಕಿರಣ ಪಾಟೀಲ ತನಿಖೆ ನಡೆಸಿದ್ದಾರೆ. ದೂರು ದಾರನ ವಿರುದ್ಧ ನಕಲಿ ವೈದ್ಯ ವೃತ್ತಿ ಮಾಡುತ್ತಿರುವ ಕುರಿತು ಈ ಹಿಂದೆ ವೈಧ್ಯಾಧಿಕಾರಿಗಳು ದಾಳಿ ಮಾಡಿ ಕ್ರಮಗೊಂಡಿದ್ದು ಸಹ ಇದೆ.