ಉಡುಪಿ: ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟ ಐವರ ಪೈಕಿ ಕರ್ನಾಟಕದ ಕುಂದಾಪುರ ತಾಲೂಕಿನ ಬೀಜಾಡಿಯವರಾದ ಯೋಧ ಅನೂಪ್ ಪಾರ್ಥಿವ ಶರೀರ ಉಡುಪಿಗೆ ಆಗಮಿಸಿದೆ.
ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹಾಗೂ ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸೇನಾಧಿಕಾರಿಗಳಿಂದ ಅನೂಪ್ ಪಾರ್ಥಿವ ಶರೀರ ಪಡೆದು ಅಂತಿಮ ನಮನ ಸಲ್ಲಿಸಿದರು. ಕೆಲವೇ ಕ್ಷಣಗಳಲ್ಲಿ ಉಡುಪಿ ನಗರದಿಂದ ಕುಂದಾಪುರಕ್ಕೆ ಮೃತದೇಹ ರವಾನೆಯಾಗಲಿದೆ.
ಬೀಜಾಡಿ ಪಡು ಸರ್ಕಾರಿ ಶಾಲಾ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಸಿದ್ಧತೆ ನಡೆದಿದೆ. ಬೀಜಾಡಿ ಕಡಲ ಕಿನಾರೆಯಲ್ಲಿ ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದ್ದು, ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.
ಕಳೆದ 13 ವರ್ಷಗಳಿಂದ ಸೈನ್ಯದಲ್ಲಿರುವ ಅನೂಪ್ 33ನೇ ವಯಸ್ಸಿಗೆ ಹವಾಲ್ದಾರ್ ಆಗಿ ಭಡ್ತಿ ಹೊಂದಿದ ವೀರ ಯೋಧ. ಅನೂಪ್ ಸಾವಿನಿಂದ ಇಡೀ ಕುಟುಂಬ ದಿಗ್ಬ್ರಾಂತಗೊಂಡಿದೆ. ಬಡತನದ ನಡುವೆ ಭಾರತಾಂಬೆಯ ಸೇವೆ ಮಾಡಬೇಕೆಂದು ಹಠದಿಂದ ಸೈನ್ಯ ಸೇರಿದ್ದ ಅನೂಪ್ 14 ವರ್ಷ ಸೇವೆ ಸಲ್ಲಿಸಿದ್ದಾರೆ. 2022ರಲ್ಲಿ ಅನೂಪ್‌ಗೆ ವಿವಾಹವಾಗಿತ್ತು. ಎರಡು ವರ್ಷದ ಪುಟ್ಟ ಮಗುವಿದ್ದು, ಇಬ್ಬರು ಸಹೋದರಿಯರು, ಅಪಾರ ಬಂಧು ಮಿತ್ರರು, ಗ್ರಾಮಸ್ಥರು, ಗೆಳೆಯರನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮೂರು ವರ್ಷ ಮತ್ತೆ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗುವ ಆಲೋಚನೆಯನ್ನು ಅನೂಪ್ ಹೊಂದಿದ್ದರು. ಈ ನಡುವೆ ಕಾಶ್ಮೀರದ ಪೂಂಚ್‌ನಲ್ಲಿ ದುರ್ಘಟನೆಯಾಗಿದೆ. 20 ದಿನದ ರಜೆಗೆ ಬಂದಿದ್ದ ಅನೂಪ್, ಶನಿವಾರವಷ್ಟೇ ಕಾಶ್ಮೀರಕ್ಕೆ ವಾಪಸ್ ಆಗಿದ್ದರು.