ಉಡುಪಿ: ಭಾರತ ಪಾಕಿಸ್ತಾನ ಯುದ್ದಭೀತಿಯ ನಡುವಲ್ಲೇ ನಗರದ ಮಲ್ಪೆ ಬಂದರಿನಲ್ಲಿ ಮಂಗಳವಾರ ಸಂಜೆ ಬಾಂಬ್ ಸ್ಪೋಟದ ಸದ್ದು ಮೊಳಗಿದೆ. ಸ್ಫೋಟದ ತೀವ್ರತೆಗೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಶಾಂತವಾಗಿದ್ದ ಕಡಲನ್ನು ನೋಡುತ್ತಾ ಮೈಮರೆತ್ತಿದ್ದ ಪ್ರವಾಸಿಗರು, ತಮ್ಮ ಕಾಯಕದಲ್ಲಿ ಬ್ಯುಸಿಯಾಗಿದ್ದ ಮೀನುಗಾರರು ಏಕಾಏಕಿಯಾಗಿ ಅಪ್ಪಳಿಸಿದ ದೊಡ್ಡ ಸದ್ದಿಗೆ ದಿಕ್ಕಾಪಾಲಾಗಿ ಓಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ್ದಾರೆ. ಗಾಯಗೊಂಡ ಐವರು ಮೀನುಗಾರರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಇದು ನಿಜ ಘಟನೆ ಅಲ್ಲ. ಸಂಭಾವ್ಯ ಆತಂಕದ ಹಿನ್ನೆಲೆಯಲ್ಲಿ ನಡೆದ ಅಣಕು ಪ್ರದರ್ಶನ.ಹೌದು, ಮಲ್ಪೆ ಮೀನುಗಾರರ ಸಂಘ, ಕರಾವಳಿ ಕಾವಲು ಪಡೆ, ಆರೋಗ್ಯ ಇಲಾಖೆ, ಮೀನುಗಾರಿಕಾ ಇಲಾಖೆ, ಅಗ್ನಿಶಾಮಕ ದಳ ಹಾಗೂ ಕಸ್ಟಮ್ಸ್ ವತಿಯಿಂದ ಜಂಟಿಯಾಗಿ ಮಲ್ಪೆ ಬಂದರಿನಲ್ಲಿ ಅಣಕು ಕಾರ್ಯಾಚರಣೆ ನಡೆಯಿತು.
ಅಗ್ನಿಶಾಮಕ ವಾಹನವು ಸೈರನ್ ಮೊಳಗಿಸುತ್ತಾ ಬಂದರಿಗೆ ಬಂದು ತಾತ್ಕಾಲಿಕ ಬೆಂಕಿಯನ್ನು ನಂದಿಸಿ, ಗಾಯಗೊಂಡವರನ್ನು ರಕ್ಷಿಸುವ ಅಣುಕು ಕಾರ್ಯಾಚರಣೆ ಮಾಡಲಾಯಿತು. ನಂತರ ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್ ಅಧಿಕಾರಿಗಳು ಹಾಗು ಮೀನುಗಾರರಿಗೆ ಕಾರ್ಯಾಚರಣೆಯ ಮಹತ್ವವನ್ನು ವಿವರಿಸಿದರು.
ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಬೋಟ್ನಲ್ಲಿ ಶಸ್ತ್ರಸಜ್ಜಿತರಾಗಿ ಬಂದರಿನ ಸುತ್ತಲೂ ಗಸ್ತು ತಿರುಗುವ ಮೂಲಕ ವಿಶೇಷ ಸನ್ನಿವೇಶದಲ್ಲಿ ಇಲಾಖೆಯ ಕಾರ್ಯದ ಬಗ್ಗೆ ಅರಿವು ಮೂಡಿಸಿದರು. ಕರಾವಳಿ ಕಾವಲು ಪಡೆಯ ಪೋಲಿಸ್ ನಿರೀಕ್ಷಕರಾದ ಪ್ರಮೋದ್, ಸೀತರಾಮ್, ಪಿಎಸ್ಐ ಫೆಮಿನಾ ಸೇರಿದಂತೆ ಮೊದಲಾದ ಅಧಿಕಾರಿಗಳು ಹಾಜರಿದ್ದರು.
ಕರ್ನಾಟಕದ 12 ಪ್ರಮುಖ ಬಂದರಿನಲ್ಲಿ ಮಲ್ಪೆ ಬಂದರು ಪ್ರಮುಖವಾಗಿದೆ. ಅತೀ ಹೆಚ್ಚು ಮೀನುಗಾರಿಕಾ ಚಟುವಟಿಕೆ ನಡೆಯುವ ಬಂದರು ಇದಾಗಿದ್ದು, ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೇ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಅಣಕು ಕಾರ್ಯಾಚರಣೆಯನ್ನು ಮಾಡಲಾಗಿದೆ. ಮೀನುಗಾರರು 3 ಬೋಟ್ಗಳು ಒಟ್ಟಿಗೆ ಮೀನುಗಾರಿಕೆ ತೆರಳಬೇಕು. ಸೂಕ್ಷ್ಮ ಪ್ರದೇಶಗಳಿಗೆ ಮೀನುಗಾರಿಕೆಗೆ ತೆರಳುವಾಗ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ ಎಂದು ಎಸ್ಪಿ ಮಿಥುನ್ ತಿಳಿಸಿದರು.