ಮುಂಬೈ : ಅಪರಿಚಿತ ವ್ಯಕ್ತಿಯೊಬ್ಬರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವಾಹನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇಮೇಲ್ ಮೂಲಕ ಬೆದರಿಕೆ ಬಂದಿದೆ ಎಂದು ಹೇಳಲಾಗಿದೆ. ಇದರ ಹಿಂದಿನ ವ್ಯಕ್ತಿಯನ್ನು ಪತ್ತೆಹಚ್ಚಲು ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. 2 ಪೊಲೀಸ್ ಠಾಣೆಗಳಿಗೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಮುಂಬೈ ಪೊಲೀಸ್, ಜೆಜೆ ಮಾರ್ಗ್ ಪೊಲೀಸ್ ಸ್ಟೇಷನ್, ಮಂತ್ರಾಲಯ ಮತ್ತು ಮುಂಬೈನ ಇತರ ಎರಡು ಸ್ಥಳಗಳಿಗೆ ಬೆದರಿಕೆ ಇಮೇಲ್‌ಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ಕಳುಹಿಸಿದ್ದು, ಉಪಮುಖ್ಯಮಂತ್ರಿಯ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದಾನೆ.
ಗೋರೆಗಾಂವ್ ಪೊಲೀಸ್ ಠಾಣೆ ಮತ್ತು ಎಂ. ಆರ್. ಎ. ಮಾರ್ಗ್ ಪೊಲೀಸ್ ಠಾಣೆ ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಮುಂಜಾನೆ ಸ್ವೀಕರಿಸಿದೆ ಎಂದು ವಲಯ 1ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪ್ರವೀಣ್ ಮುಂಡೆ ಖಚಿತಪಡಿಸಿದ್ದಾರೆ. ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಕಳೆದ ತಿಂಗಳು, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಥಾಣೆಯಲ್ಲಿ 26 ವರ್ಷದ ಯುವಕನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.