ಬೆಂಗಳೂರು: ಐಸ್‌ಕ್ರೀಮ್, ಕೇಕ್, ಗೋಬಿಮಂಚೂರಿ… ಹೀಗೆ ನಿತ್ಯ ಸೇವಿಸುವ ಹಲವು ಆಹಾರವಸ್ತುಗಳಲ್ಲಿ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳಿಗೆ ಕಾರಣವಾಗುವ ರಾಸಾಯನಿಕ ಅಂಶ ಇರುವುದನ್ನು ಪತ್ತೆ ಹಚ್ಚಿ ಜನರಿಗೆ ಎಚ್ಚರಿಕೆ ನೀಡಿರುವ ಆಹಾರ ಇಲಾಖೆ ಈಗ ಬಾಟಲಿಗಳಲ್ಲಿ ಸಿಗುವ ಮಿನರಲ್ ವಾಟರ್ ಕೂಡ ಸೇವನೆಗೆ ಅಸುರಕ್ಷಿತ ಎಂದು ಹೇಳಿದೆ.
ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರಿನ ಪೈಕಿ ಶೇ.50ರಷ್ಟು ಬಾಟಲಿಗಳು ಕಳಪೆಯಾಗಿವೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಬಾಟಲ್ ನೀರಿನಲ್ಲಿ ಮಿನರಲ್ ಅಂಶ ಕೂಡ ಇರುವುದಿಲ್ಲ. ಲೇಬಲಗಳಲ್ಲಿ ಮಾತ್ರ ಮಿನರಲ್ ವಾಟರ್ ಎಂದು ಮುದ್ರಿಸಿಕೊಂಡಿರುತ್ತಾರೆ. ಸಾಕಷ್ಟು ಕಂಪನಿಗಳ ವಾಟರ್ ಬಾಟಲ್ ಅಸುರಕ್ಷಿತ ಎಂದು ವರದಿ ತಿಳಿಸಿದೆ. ಜತೆಗೆ ಸಿಹಿತಿಂಡಿಗಳಿಗೆ ಬಳಸುವ ಕೋವಾ ಕೂಡ ಕಲಬೆರಕೆಯಾಗುತ್ತಿದೆ ಎಂದು ತಿಳಿಸಿದೆ.
ನಕಲಿ ವಾಟರ್ ಬಾಟಲ್ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಆಹಾರ ಇಲಾಖೆ ಕಾರ್ಯಾಚರಣೆ ಮುಂದುವರಿಸಿದೆ. ವಿವಿಧೆಡೆ ದಾಳಿ ನಡೆಸಿ ವಾಟರ್ ಬಾಟಲ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶೇ.50ರಷ್ಟು ಕಂಪನಿಗಳ ಬಾಟಲಿ ನೀರು ಕಳಪೆಯಾಗಿರುವುದು ಕಂಡುಬಂದಿದೆ. ಅನೇಕ ಕಂಪನಿಗಳು ನೀರನ್ನು ಸರಿಯಾಗಿ ಫಿಲ್ಟರ್ ಕೂಡ ಮಾಡಿರುವುದಿಲ್ಲ, ಜಲಮೂಲಗಳಿಂದ ಎತ್ತಿ ಹಾಗೇ ಬಾಟಲಿಗಳಿಗೆ ತುಂಬಿಸಿ ಕಳುಹಿಸುತ್ತಿವೆ ಎಂಬ ಆಘಾತಕಾರಿ ವಿಚಾರ ಪತ್ತೆಯಾಗಿದೆ.