ಮಧ್ಯಪ್ರದೇಶ : ಮಧ್ಯಪ್ರದೇಶದ ರಾಯಸೇನ್ ಜಿಲ್ಲೆಯಲ್ಲಿ ಬರೇಲಿ-ಪಿಪರಿಯಾ ರಾಜ್ಯ ಹೆದ್ದಾರಿಯ ನಯಾಗಾಂವ್ ಸೇತುವೆಯಲ್ಲಿ ನಡೆಯುತ್ತಿದ್ದ ನಿರ್ವಹಣಾ ಕಾರ್ಯದ ವೇಳೆ ದೊಡ್ಡ ದುರಂತ ಸಂಭವಿಸಿದೆ. ಸೇತುವೆಯ ಸ್ಪ್ಯಾನ್ ಅಕಸ್ಮಾತ್ ಕುಸಿದು ಬಿದ್ದು ಭಾರೀ ಅನಾಹುತಕ್ಕೆ ಕಾರಣವಾಗಿದೆ.
ಸೇತುವೆ ಕುಸಿದಾಗ ಎರಡು ಬೈಕ್ಗಳಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಾಜಿ CRPF ಜವಾನ್ ದೇವೇಂದ್ರ ಧಕಾಡ್ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಧಾವಿಸಿ ಶೋಧ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸೇತುವೆಯ ನಿರ್ವಹಣೆಯಲ್ಲಿ ಭದ್ರತಾ ಕ್ರಮಗಳ ಕುರಿತಂತೆ ಪ್ರಶ್ನೆಗಳು ಏರಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದ್ದು, ಸಂಬಂಧಿತ ಇಲಾಖೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.
































