ಜೈಪುರ: ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಬಲಿಯಾದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಈ ಮಧ್ಯೆ ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿಯಲ್ಲಿ ಬಾರ್ಡರ್ ಕ್ರಾಸ್ ಮಾಡಿದ ಪಾಕಿಸ್ತಾನಿ ರೇಂಜರ್ ನನ್ನು ಬಿಎಸ್ಎಫ್ ವಶಕ್ಕೆ ಪಡೆದಿದೆ ಎಂದು ಮೂಲಗಳು ಶನಿವಾರ (ಮೇ 3) ತಿಳಿಸಿವೆ.
ಭಾರತದ ಬಿಎಸ್ಎಫ್ ಯೋಧನನ್ನು ಪಾಕಿಸ್ತಾನ ವಶಕ್ಕೆ ಪಡೆದ ಸುಮಾರು 10 ದಿನಗಳ ಬಳಿಕ ಈ ಘಟನೆ ನಡೆದಿದೆ.ಗಡಿ ದಾಟಿ ಬಂದ ಪಾಕಿಸ್ತಾನಿ ರೇಂಜರ್ನನ್ನು ರಾಜಸ್ಥಾನ ಗಡಿ ಪಡೆ ವಶಕ್ಕೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿಎಸ್ಎಫ್ ಜವಾನ್ ಪೂರ್ಣಮ್ ಕುಮಾರ್ ಶಾ ಅವರನ್ನು ಏ. 23ರಂದು ಪಂಜಾಬ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ರೇಂಜರ್ಗಳು ಬಂಧಿಸಿದ್ದರು. ಭಾರತದ ಬಲವಾದ ಮನವಿಯ ಹೊರತಾಗಿಯೂ ಪಾಕ್ ಅವರನ್ನು ಹಸ್ತಾಂತರಿಸಲು ನಿರಾಕರಿಸಿದೆ.