ನವದೆಹಲಿ: ದೆಹಲಿಯ ಮಳಿಗೆಯೊಂದರಲ್ಲಿ ಆಭರಣ ದರೋಡೆ ಮಾಡಿದ ಆರೋಪದಡಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರೊಬ್ಬರನ್ನು ಬಂಧಿಸಲಾಗಿದೆ.
22 ವರ್ಷದ ಗೌರವ್ ಯಾದವ್ ಬಂಧಿತ ಯೋಧ. ಕಳೆದ ತಿಂಗಳಷ್ಟೆ ಇವರು ಬಿಎಸ್‌ಎಫ್‌ಗೆ ನಿಯೋಜನೆಗೊಂಡಿದ್ದರು. ಪಂಜಾಬ್‌ನ ಫಾಜಿಲ್ಕಾದಲ್ಲಿ ಯಾದವ್ ಅವರನ್ನು ಬಿಎಸ್ಎಫ್ ಕರ್ತವ್ಯಕ್ಕೆ ನಿಯೋಜಿಸಿತ್ತು.
ದರೋಡೆ ಪ್ರಕರಣ ನಡೆಯುವುದಕ್ಕೂ ಒಂದು ದಿನ ಮುಂಚಿತವಾಗಿಯಷ್ಟೇ ಜೂನ್ 18ರಂದು ಗೌರವ್ ಯಾದವ್ ನನ್ನು ಫಝಿಲ್ಕಾದ ಗಡಿ ಭದ್ರತಾ ಪಡೆಗೆ ನಿಯೋಜಿಸಲಾಗಿತ್ತು. ನಂತರ, ರಜೆ ಪಡೆದಿದ್ದ ಆತ, ದೆಹಲಿಗೆ ತೆರಳಿದ್ದ. ರೈಲು ಬದಲಾವಣೆಯ ಅವಧಿಯಲ್ಲಿ ರೈಲಿಗಾಗಿ ಕಾಯುವಾಗ ದರೋಡೆಯ ಯೋಜನೆ ರೂಪಿಸಿದ್ದಎಂದು ಶಹ್ದಾರದ ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಗೌತಮ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜೂನ್ 19ರಂದು ಈ ಘಟನೆ ನಡೆದಿದ್ದು, ನೈಜ ಪಿಸ್ತೂಲಿನಂತೆ ಕಂಡು ಬರುತ್ತಿದ್ದ ಆಟಿಕೆ ಗನ್ ಒಂದನ್ನು ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬ ಫರ್ಶ್ ಬಝಾರ್ ನಲ್ಲಿರುವ ಚಿನ್ನಾಭರಣ ಅಂಗಡಿಯೊಂದನ್ನು ಪ್ರವೇಶಿಸಿದ್ದ. ಬಳಿಕ, ನಾಲ್ಕು ಚಿನ್ನದ ಬ್ರೇಸ್ ಲೇಟ್ ಗಳನ್ನು ಕಳವು ಮಾಡಿ, ಅಲ್ಲಿಂದ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಬಳಿಕ ಗೌರವ್ ಸಿಕ್ಕಿಬಿದ್ದಿದ್ದು, ತಪ್ಪೊಪ್ಪಿಕೊಂಡಿದ್ದಾರೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಫರ್ಶ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ಚಾಲನೆ ನೀಡಲಾಗಿದೆ ಎಂದೂ ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಗೌತಮ್ ಹೇಳಿದ್ದಾರೆ.