ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಕ್ರಮ ಕೈಗೊಂಡಿದೆ. ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಗುರುವಾರ ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಆದರೆ ಅಧಿಕೃತವಾಗಿ ಇನ್ನೂ ಘೋಷಣೆಯಾಗಿಲ್ಲ. ನಾಲ್ಕು ರಸ್ತೆ ಸಾರಿಗೆ ನಿಗಮಗಳು ಶೇ. 25ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಶಕ್ತಿ ಯೋಜನೆ ಹೊರೆ, ಇಂಧನ ವೆಚ್ಚ, ಬಾಕಿ ವೇತನ, ನಿರ್ವಹಣಾ ವೆಚ್ಚದ ಹಿನ್ನೆಲೆಯಲ್ಲಿ ಟಿಕೆಟ್ ದರ ಹೆಚ್ಚಳ ಮಾಡುವಂತೆ ನಿಗಮಗಳು ಮನವಿ ಮಾಡಿದ್ದವು. ಆದರೆ, ಸರ್ಕಾರ ಶೇ 15ರಷ್ಟು ಟಿಕೆಟ್ ದರ ಏರಿಕೆಗೆ ಸಮ್ಮತಿಸಿದೆ. ಕಳೆದ ಹತ್ತು ವರ್ಷದಲ್ಲಿ ಎರಡು ಬಾರಿ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.
2014 ಮತ್ತು 2020ರಲ್ಲಿ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಬಳಿಕ ಟಿಕೆಟ್ ದರ ಏರಿಕೆ ಮಾಡಿರಲಿಲ್ಲ. ಶೇ.15ರಷ್ಟು ದರ ಹೆಚ್ಚಳದಿಂದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ದಿನಕ್ಕೆ ಸುಮಾರು 6-7 ಕೋಟಿ ರೂಪಾಯಿ ಆದಾಯ ಹೆಚ್ಚಳ ಆಗುವ ನಿರೀಕ್ಷೆ ಇದೆ. ಆ ಮೂಲಕ ವಾರ್ಷಿಕವಾಗಿ 3 ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಬರುವ ನಿರೀಕ್ಷೆ ಇದೆ. ಈಗಾಗಲೇ ಸಾರಿಗೆ ನಿಗಮಗಳು ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ತೀವ್ರ ಆದಾಯದ ಕೊರತೆ ಎದುರಿಸುತ್ತಿವೆ.