ಒಟ್ಟಾವಾ : ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಮ್ಮ ಲಿಬರಲ್ ಪಕ್ಷದೊಳಗೆ ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಿರುವ ಕಾರಣದಿಂದಾಗಿ ಈ ವಾರ ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಟ್ರುಡೋ ಪ್ರತಿನಿಧಿಸುತ್ತಿರುವ ಲಿಬರಲ್ ಪಕ್ಷದ ಸಂಸದರೇ ಈಗ ಪ್ರಧಾನಿ ವಿರುದ್ಧ ತಿರುಗಿ ಬಿದ್ದಿದ್ದು ರಾಜೀನಾಮೆಗೆ ಆಗ್ರಹಿಸಿದ್ದಾರೆ. ಟ್ರುಡೋ ಯಾವಾಗ ರಾಜೀನಾಮೆ ಘೋಷಿಸುತ್ತಾರೆ ಎಂಬುದು ಖಚಿತವಾಗಿ ತಿಳಿದಿಲ್ಲ. ಬುಧವಾರದ ಪಕ್ಷದ ರಾಷ್ಟ್ರೀಯ ಸಭೆ ನಡೆಯುವ ಮೊದಲೇ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಕ್ಷದ ಆಂತರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕಾಏಕಿ ರಾಜೀನಾಮೆ ಘೋಷಣೆ ಮಾಡುತ್ತಾರಾ ಅಥವಾ ಲಿಬರಲ್ ಪಕ್ಷವು ಹೊಸ ನಾಯಕನನ್ನು ಹುಡುಕುವವರೆಗೆ ಟ್ರುಡೊ ಹಂಗಾಮಿ ಪ್ರಧಾನಿಯಾಗಿ ಮುಂದುವರೆಯುತ್ತಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಟ್ರುಡೋ ಅವರು 2013 ರಲ್ಲಿ ಲಿಬರಲ್ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಟ್ರೂಡೊ 2015 ರಲ್ಲಿ ವಿಜಯವನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದರು. ಅದರ ಬಳಿಕ, 2019 ಮತ್ತು 2021 ರಲ್ಲೂ ಅವರು ತಮ್ಮ ಪಕ್ಷದ ಲಿಬರಲ್ಸ್ ಅನ್ನು ವಿಜಯದತ್ತ ಮುನ್ನಡೆಸಿದರು.
ಇನ್ನು ಇದೇ ಅಕ್ಟೋಬರ್ ಅಂತ್ಯದಲ್ಲಿ ಕೆನಡಾದಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಲಿಬರಲ್ ಪಕ್ಷ ಹೀನಾಯವಾಗಿ ಸೋಲಲಿದೆ ಎಂದು ಈಗಾಗಲೇ ಸಮೀಕ್ಷೆಗಳು ತಿಳಿಸಿವೆ. ಹೀಗಾಗಿ ಟ್ರೂಡೊ ಅವರ ಪ್ರಧಾನಿ ಹುದ್ದೆಗೆ ಕಂಟಕ ಎದುರಾಗಿದೆ.