ಬೆಂಗಳೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ 24 ಹುದ್ದೆಗಳ ನೇಮಕಾತಿಯಲ್ಲಿ 10 ಅಭ್ಯರ್ಥಿಗಳು ಒಎಂಆರ್ ಶೀಟ್ ತಿದ್ದಿ ಆಯ್ಕೆಯಾಗಿರುವ ಭಾರಿ ಅಕ್ರಮವನ್ನು ಕರ್ನಾಟಕ ಲೋಕಸೇವಾ ಆಯೋಗದ ತನಿಖಾ ಸಮಿತಿ ಪತ್ತೆ ಮಾಡಿದೆ.
ಈ 10 ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಪಡಿಸಲು ನಿರ್ಧರಿಸಲಾಗಿದ್ದು, ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಲು ಮುಂದಾಗಿದೆ. ಅಕ್ರಮಕ್ಕೆ ಕಾರಣರಾದ ಎಲ್ಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ನೇಮಕಾತಿ ಪರೀಕ್ಷಾ ಹಂತದಲ್ಲಿ ಅಕ್ರಮ ನಡೆದ ಬಗ್ಗೆ ದೂರು ಬರುತ್ತಿದ್ದಂತೆಯೇ ಕೆಪಿಎಸ್ಸಿ ಸದಸ್ಯರಾದ ಡಾ. ಶಾಂತಾ ಹೊಸಮನಿ ನೇತೃತ್ವದಲ್ಲಿ ಮೂರು ಮಂದಿಯ ಉಪಸಮಿತಿಯನ್ನು ರಚಿಸಲಾಗಿತ್ತು. ನಂತರ ಹಿರಿಯ ಸದಸ್ಯ ವಿಜಯಕುಮಾರ್ ಡಿ. ಕುಚನೂರೆ ಅಧ್ಯಕ್ಷತೆಯಲ್ಲಿ ಮತ್ತೊಂದು ತನಿಖಾ ಸಮಿತಿಯನ್ನು ಆಯೋಗ ರಚಿಸಿತ್ತು.
ತನಿಖೆಯ ವೇಳೆ 10 ಮಂದಿ ಅಭ್ಯರ್ಥಿಗಳು ಅಕ್ರಮ ಎಸಗಿರುವುದು ಗೊತ್ತಾಗಿದೆ. ಕಳಂಕಿತ ಅಭ್ಯರ್ಥಿಗಳ ಆಯ್ಕೆ ರದ್ದು ಮಾಡಬೇಕು. ಪೊಲೀಸ್ ದೂರು ದಾಖಲಿಸಲು ಕ್ರಮ ಕೈಗೊಳ್ಳಬೇಕು. ಸಿಐಡಿ ತನಿಖೆಗೆ ಪ್ರಕರಣ ವಹಿಸಲು ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.