ಅಧಿವೇಶನ ಮುಗಿದ ನಂತರ ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಅನರ್ಹರನ್ನು ಪತ್ತೆ ಮಾಡಿ ಎಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುವುದು, ಅನರ್ಹ ಪಡಿತರ ಚೀಟಿ ರದ್ದತಿ ನಂತರ ಹೊಸ ಪಡಿತರ ಚೀಟಿ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಬಿಜೆಪಿಯ ಪ್ರತಾಪಸಿಂಹ ನಾಯಕ್ ಹಾಗೂ ಕಾಂಗ್ರೆಸ್ಸಿನ ಡಾ| ಯತೀಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ 15 ಲಕ್ಷ ಅನರ್ಹ ಪಡಿತರ ಚೀಟಿ ರದ್ದು ಮಾಡಲು ಮುಂದಾದಾಗ ಗೊಂದಲ ಉಂಟಾಗಿದ್ದರಿಂದ ಪಡಿತರ ಚೀಟಿ ರದ್ದು ಪ್ರಕ್ರಿಯೆ ನಿಲ್ಲಿಸಬೇಕಾಯಿತು. ಆದರೆ ಈಗ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ ಅನರ್ಹ ಪಡಿತರ ಚೀಟಿ ರದ್ದುಗೊಳಿಸಲಾಗುವುದು ಎಂದರು.
ಸುಮಾರು ಒಂದು ಲಕ್ಷ ಪಡಿತರ ಚೀಟಿದಾರರು ಪಡಿತರ ತೆಗೆದುಕೊಳ್ಳದ ಕಾರಣ ರದ್ದು ಮಾಡಲಾಗಿದೆ. ಆದರೆ ಬೇರೆ ಬೇರೆ ಕಾರಣಕ್ಕೆ ಪಡಿತರ ಚೀಟಿ ಅವಶ್ಯವಿದ್ದರೆ ಪರಿಶೀಲಿಸಿ ಎಪಿಎಲ್ ಕಾರ್ಡ್ ನೀಡಲು ಕ್ರಮ ವಹಿಸಲಾಗುವುದು ಎಂದರು.
ರಾಜ್ಯದಲ್ಲಿ ಚಾಲ್ತಿಯಲ್ಲಿರುವ ವಿವಿಧ ಪಡಿತರ ಚೀಟಿಗಳ ಪೈಕಿ ಸುಮಾರು 12.69 ಲಕ್ಷ ಪಡಿತರ ಚೀಟಿಗಳು ಶಂಕಾಸ್ಪದವಾಗಿದ್ದು, ಈ ಪಡಿತರ ಚೀಟಿ ಹಾಗೂ ಫಲಾನುಭವಿಗಳನ್ನು ಜಿಲ್ಲಾ/ ತಾಲ್ಲೂಕು ಮಟ್ಟದಲ್ಲಿ ಆಹಾರ ನಿರೀಕ್ಷಕರ ಹಂತದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಅಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.