ಜಿಎಸ್ಟಿ 2.0 ಜಾರಿ ಮತ್ತು ಹಬ್ಬದ ಋತುವಿನ ಆರಂಭದಿಂದಾಗಿ ಭಾರತದ ಪ್ರಮುಖ ಕಾರು ತಯಾರಕ ಕಂಪನಿಗಳು ನವರಾತ್ರಿ ವೇಳೆ ಐತಿಹಾಸಿಕ ಮಾರಾಟ ದಾಖಲಿಸಿವೆ. ಹೊಸ ತೆರಿಗೆ ನೀತಿಯಿಂದಾಗಿ ಕಾರುಗಳ ಬೆಲೆಗಳು ದೊಡ್ಡ ಮಟ್ಟಕ್ಕೆ ಕಡಿಮೆಯಾಗಿದ್ದು, ಇದರ ಜತೆಗೆ ಕಂಪನಿಗಳು ನೀಡುತ್ತಿರುವ ಹಬ್ಬದ ಕೊಡುಗೆಗಳು ಗ್ರಾಹಕರನ್ನು ಶೋರೂಂನತ್ತ ಆಕರ್ಷಿಸಿವೆ.
ಕೆಲವು ಮಳಿಗೆಗಳಲ್ಲಂತೂ ಜನರು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದಿವೆ. ನವರಾತ್ರಿಯ ಮೊದಲೆರಡು ದಿನವಾದ ಸೆಪ್ಟೆಂಬರ್ 22ರಂದು, ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಗಳಾದ ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ಅಭೂತಪೂರ್ವ ಮಾರಾಟವನ್ನು ದಾಖಲಿಸಿವೆ. ಇದು ಕಳೆದ ಕೆಲವು ವರ್ಷಗಳಲ್ಲಿಯೇ ಅತಿ ದೊಡ್ಡ ಏಕದಿನದ ಮಾರಾಟವಾಗಿವೆ ಎಂದು ಕಂಪನಿಗಳು ಹೇಳಿವೆ.
ಮಾರುತಿ ಸುಜುಕಿ ಕಂಪನಿ ಸುಮಾರು 30,000 ಕಾರುಗಳನ್ನು ವಿತರಿಸಿದ್ದು, ಇದು ಕಂಪನಿಯ 35 ವರ್ಷಗಳ ಇತಿಹಾಸದಲ್ಲಿಯೇ ಒಂದು ದಿನದಲ್ಲಿ ನಡೆದ ಅತಿದೊಡ್ಡ ಮಾರಾಟವಾಗಿದೆ. ಅಲ್ಲದೆ ಸುಮಾರು 80,000 ಗ್ರಾಹಕರು ಕಾರು ಖರೀದಿಗೆ ವಿಚಾರಣೆ ನಡೆಸಿದ್ದಾರೆ. ಹುಂಡೈ ಒಂದೇ ದಿನದಲ್ಲಿ ಸುಮಾರು 11,000 ಡೀಲರ್ ಬಿಲ್ಲಿಂಗ್ಗಳನ್ನು ದಾಖಲಿಸಿದ್ದು, ಇದು ಕಳೆದ ಐದು ವರ್ಷಗಳಲ್ಲಿ ಕಂಪನಿಯ ಅತ್ಯುತ್ತಮ ಏಕದಿನ ಮಾರಾಟವಾಗಿದೆ.
ಟಾಟಾ ಮೋಟಾರ್ಸ್ ಸುಮಾರು 10,000 ಕಾರುಗಳನ್ನು ವಿತರಣೆ ನಡೆಸಿದ್ದು, ಇದು ಕೂಡ ಕಂಪನಿಯ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. 25,000ಕ್ಕೂ ಹೆಚ್ಚು ಜನರು ಕಾರುಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಹೊಸ ಜಿಎಸ್ಟಿ 2.0 ನೀತಿಯಡಿಯಲ್ಲಿ ಕಾರುಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದ್ದು, ಇದು ಬೆಲೆ ಇಳಿಕೆಗೆ ಮುಖ್ಯ ಕಾರಣವಾಗಿದೆ. 4 ಮೀಟರ್ಗಿಂತ ಚಿಕ್ಕದಾದ ಕಾರುಗಳನ್ನು ಈಗ ಶೇ. 18ರ ತೆರಿಗೆ ವ್ಯಾಪ್ತಿಗೆ ತರಲಾಗಿದ್ದು, ಈ ಹಿಂದೆ ಇವುಗಳ ಮೇಲೆ ಶೇ.28ರಷ್ಟು ಜಿಎಸ್ಟಿ ಮತ್ತು ಶೇ. 1 ರಿಂದ ಶೇ. 3ರವರೆಗೆ ಸೆಸ್ ಸೇರಿ ಒಟ್ಟು ಶೇ.29ರಿಂದ ಶೇ. 31ರವರೆಗೆ ತೆರಿಗೆ ಇತ್ತು. ದೊಡ್ಡ ಮತ್ತು ಐಷಾರಾಮಿ ಕಾರುಗಳನ್ನು ಈಗ ಶೇ.40ರ ತೆರಿಗೆ ವ್ಯಾಪ್ತಿಯಲ್ಲಿ ಇರಿಸಲಾಗಿದ್ದು, ಈ ಹಿಂದೆ ಇವುಗಳ ಮೇಲೆ ಶೇ.43 ರಿಂದ ಶೇ. 50 ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು.
ಜಿಎಸ್ಟಿ ದರ ಕಡಿತದ ಜತೆಗೆ, ಕಂಪನಿಗಳು ಕೂಡ ಹೆಚ್ಚುವರಿ ಹಬ್ಬದ ಕೊಡುಗೆಗಳನ್ನು ನೀಡುತ್ತಿದ್ದು, ಇದು ಮಾರಾಟವನ್ನು ಮತ್ತಷ್ಟು ಹೆಚ್ಚಿಸಿದೆ. ಮಾರುತಿ ಸುಜುಕಿಯ ಎಸ್-ಪ್ರೆಸ್ಸೊ ಕಾರಿನ ಬೆಲೆ 1.30 ಲಕ್ಷ ರೂ., ಆಲ್ಟೊ ಕೆ10 ದರ 1.08 ಲಕ್ಷ ರೂ., ಬಲೆನೊ ಬೆಲೆ 86,100 ರೂ., ಸ್ವಿಫ್ಟ್ ದರ 84,600 ರೂ., ಮತ್ತು ಬ್ರೆಝಾ ಬೆಲೆ 1.13 ಲಕ್ಷ ರೂ. ವರೆಗೆ ಕಡಿಮೆಯಾಗಿದೆ. ಹ್ಯುಂಡೈನ ತನ್ನ ಜನಪ್ರಿಯ ಎಸ್ಯುವಿ ಟಕ್ಸನ್ ದರ 2.40 ಲಕ್ಷ ರೂ. ವರೆಗೆ ಇಳಿಕೆಯಾಗಿದ್ದರೆ, ಕ್ರೇಟಾ ಬೆಲೆ 72,145 ರೂ., ವೆನ್ಯೂ ದರ 1.24 ಲಕ್ಷ ರೂ., ಮತ್ತು ಐ20 ಬೆಲೆ 98,053 ರೂ.ವರೆಗೆ ಕಡಿತಗೊಂಡಿದೆ. ಟಾಟಾ ಮೋಟಾರ್ಸ್ ಜಿಎಸ್ಟಿ ಕಡಿತ ಮತ್ತು ಹಬ್ಬದ ಕೊಡುಗೆಗಳನ್ನು ಸೇರಿಸಿ ತನ್ನ ಕಾರುಗಳ ಮೇಲೆ 2 ಲಕ್ಷ ರೂ. ವರೆಗೆ ಪ್ರಯೋಜನಗಳನ್ನು ನೀಡುತ್ತಿದೆ.
ನೆಕ್ಸಾನ್ ಬೆಲೆ 2 ಲಕ್ಷ ರೂ., ಸಫಾರಿ ದರ 1.98 ಲಕ್ಷ ರೂ., ಮತ್ತು ಆಲ್ಟ್ರೋಜ್ ಬೆಲೆ 1.76 ಲಕ್ಷ ರೂ. ಕಡಿಮೆಯಾಗಿದ್ದು, ಭರ್ಜರಿ ರಿಯಾಯಿತಿಗಳು ಲಭ್ಯವಿವೆ. ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಭದ್ರಾ ಕಾಲುವೆಗೆ ತಳ್ಳಿ ಹತ್ಯೆಗೈದ ಪ್ರಿಯಕರ