ಚಿತ್ರದುರ್ಗ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೇಲೆ ಬಂದಿರುವ ಕಳಂಕವನ್ನು ಮರೆ ಮಾಚಲು ಜಾತಿ ಗಣತಿಯನ್ನು ಮುನ್ನೆಲೆಗೆ ತರುವ ಪ್ರಯುತ್ನ ಮಾಡುತ್ತಿದ್ದಾರೆಂದು ಮಾಜಿ ಸಚಿವ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದನ್ನು ಮರೆ ಮಾಚಲು ಸಿದ್ದರಾಮಯ್ಯನವರು ಪಟ್ಟಿಗೆ ಪ್ರತಿ ಪಟ್ಟು ಹೆಣೆಯುತ್ತಿದ್ದಾರೆ.
ವಾಲ್ಮೀಕಿ ಅಭಿವೃದ್ದಿ ನಿಗಮ, ಮೂಡಾ, ಆರ್ಕಾವತಿ ಹಗರಣದಿಂದ ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. ಜಾತಿ ಗಣತಿ ಬಗ್ಗೆ ಪ್ರಾಮಾಣಿಕತೆ, ಬದ್ದತೆಯಿದ್ದಿದ್ದರೆ ಮುಖ್ಯಮಂತ್ರಿಗಳು ಇಷ್ಟೊತ್ತಿಗಾಗಲೆ ಕಾಂತರಾಜ್ ವರದಿಯನ್ನು ಅನುಷ್ಠಾನಗೊಳಿಸಬೇಕಿತ್ತು. ಜಾತಿ ಸಮೀಕ್ಷೆ ಕುರಿತು ಚರ್ಚೆಯೂ ನಡೆಸಿಲ್ಲ. ರಾಜ್ಯದ ಜನರ ಗಮನ ಬೇರೆ ಕಡೆ ಸೆಳೆಯುವುದಕ್ಕಾಗಿ ಬಿಜೆಪಿ. ಆರ್.ಎಸ್.ಎಸ್.ನವರು ಮೀಸಲಾತಿ ವಿರೋಧಿಗಳು ಎನ್ನಲು ಶುರು ಮಾಡಿದ್ದಾರೆ. ನೆಹರು ದೇಶದ ಪ್ರಧಾನಿಯಾಗಿದ್ದಾಗ ಮೀಸಲಾತಿ ವಿರೋಧಿಸುವಂತೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದನ್ನು ಪ್ರಧಾನಿ ಮೋದಿ ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿರುವುದೊಂದು ಕೆಟ್ಟ ಸರ್ಕಾರ ಎಂದು ಟೀಕಿಸಿದರು.
ಪರಿಶಿಷ್ಟ ಜಾತಿಗೆ 15 ರಿಂದ 17 ಪರ್ಸೆಂಟ್, ಪರಿಶಿಷ್ಟ ವರ್ಗಕ್ಕೆ 3 ರಿಂದ 7 ಪರ್ಸೆಂಟ್ ಮೀಸಲಾತಿಯನ್ನು ಹೆಚ್ಚಿಸಿದ್ದು, ಬಿಜೆಪಿ. ಸರ್ಕಾರ. ಬಡ್ತಿ ಮೀಸಲಾತಿ ಪರವಾಗಿ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದು, ಬಿಜೆಪಿ.ಎನ್ನುವುದನ್ನು ಕಾಂಗ್ರೆಸ್ ಮರೆತಂತಿದೆ. ಆಧಾರ್ ಕಾರ್ಡ್ ಆಧರಿಸಿ ಪ್ರತಿಯೊಬ್ಬರ ಸಮೀಕ್ಷೆಯಾಗಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸ್ಥಿತಿಗತಿಗಳನ್ನು ಅವಲೋಕಿಸಿ ಹಿಂದುಳಿದ ವರ್ಗ ಹಾಗೂ ಸಣ್ಣ ಸಣ್ಣ ಜಾತಿಗಳಿಗೂ ಮೀಸಲಾತಿ ಕೊಡಬೇಕು. ಕೇವಲ ಹಿಂದೂಗಳಿಗಷ್ಟೆ ಅಲ್ಲ. ಮುಸಲ್ಮಾನರಿಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. ಸಲ್ಲಿಸಿರುವ ವರದಿಯಲ್ಲಿ 42 ಕೋಟಿ ರೂ. ನಾಗೇಂದ್ರ ಆಪ್ತನಿಗೆ ಹೋಗಿದೆ. ಇಪ್ಪತ್ತು ಕೋಟಿ ರೂ. ಚುನಾವಣೆಗೆ ಖರ್ಚಾಗಿದೆ. ಸಿ.ಎಂ.ನೇಮಿಸಿರುವ ಎಸ್.ಐ.ಟಿ. ನಾಗೇಂದ್ರ ಹೆಸರನ್ನು ಉಲ್ಲೇಖಿಸಿಲ್ಲ. ಮೊದಲು ಎಸ್.ಐ.ಟಿ. ಬಗ್ಗೆ ತನಿಖೆಯಾಗಲಿ ಎಂದು ಸಿ.ಟಿ.ರವಿ ಒತ್ತಾಯಿಸಿದರು.
ದಾವಣಗೆರೆ, ಬೆಂಗಳೂರಿನಲ್ಲಿ ಪಾಕಿಸ್ತಾನಿ ಪ್ರಜೆಗಳು ಪತ್ತೆಯಾಗಿದ್ದಾರೆ. ವ್ಯವಸ್ಥಿತ ಜಾಲವೇ ದೇಶದ ಉದ್ದಗಲಕ್ಕೂ ಹರಡಿಕೊಂಡಿದೆ. ಇದರಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಾಗಲಿದೆ. ಭಯೋತ್ಪಾದಕರು ದೇಶದಲ್ಲಿ ನುಸುಳಬಹುದು. ಇವರಿಗೆಲ್ಲಾ ಪಾಸ್ಪೋರ್ಟ್ ಹೇಗೆ ಸಿಗುತ್ತದೆಂಬುದೇ ಯಕ್ಷ ಪ್ರಶ್ನೆ? ವಸತಿ ಸಚಿವ ಜಮೀರ್ ವಕ್ಫ್ ಆಸ್ತಿ ಯಾರಪ್ಪನ ಮನೆ ಸ್ವತ್ತಲ್ಲ ಎಂದು ಬಸವನಗೌಡ ಪಾಟೀಲ್ ಯತ್ನಾಳ್ಗೆ ದುರಹಂಕಾರದ ಮಾತುಗಳನ್ನಾಡಿದ್ದಾರೆ. ಕಂಡ ಕಂಡ ಆಸ್ತಿಯನ್ನೆಲ್ಲಾ ವಕ್ಫ್ ಆಸ್ತಿ ಮಾಡಿಕೊಳ್ಳಲು ಅವರಪ್ಪನ ಮನೆ ಆಸ್ತಿಯಲ್ಲ ಎಂದು ತಿರುಗೇಟು ನೀಡಿದರು.
ಸಚಿವ ಜಮೀರ್ ಮೊದಲು ಸಂವಿಧಾನ, ಕಾನೂನು ಅರ್ಥಮಾಡಿಕೊಳ್ಳಲಿ. ಆಪಾದನೆಗೆ ಒಳಗಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಗಿ ಕಳೆದುಕೊಂಡು ರಕ್ಷಣೆ ಮಾಡಿಕೊಳ್ಳಲು ಹೆಣಗಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ಕುಮಾರ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ವಕ್ತಾರ ನಾಗರಾಜ್ಬೇದ್ರೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.