ರಾಜ್ಯದಲ್ಲಿ ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- ಜಾತಿ ಜನಗಣತಿಯನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮುಂಬರುವ ದಸರಾ ರಜಾದಿನಗಳಲ್ಲಿ ಗಣತಿ ನಡೆಸಲು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ.
ಜಾತಿ ಗಣತಿಗೆ ಶಾಲಾ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಿರುವ ಹಿನ್ನೆಲೆಯಲ್ಲಿ ದಸರಾ ರಜೆಯಲ್ಲಿ ಅವರ ಕರ್ತವ್ಯವನ್ನು ಬಳಸಿಕೊಳ್ಳಲು ಹಿಂದುಳಿದ ಆಯೋಗ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್.ನಾಯಕ್ ಈ ಕುರಿತು ಮಾಹಿತಿ ನೀಡಿದ್ದು ಗಣತಿಗೆ ಶಿಕ್ಷಕರು ಮೊದಲ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ರಜೆ ದಿನಗಳಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಲಿದೆ, ಹೀಗಾಗಿಯೇ ದಸರಾ ರಜೆಯಲ್ಲಿ ಅವರ ಸೇವೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಮೀಕ್ಷೆಗಳಿಗೆ ಸರ್ಕಾರಿ ಮತ್ತು ಅನುದಾನಿತ ಶಿಕ್ಷಕರನ್ನು ಬಳಸಿಕೊಳ್ಳುವುದು ಬಹು ಹಿಂದಿನಿಂದ ನಡೆದುಕೊಂಡ ಬಂದ ಪರಿಪಾಠ. ಈ ಹಿನ್ನೆಲೆಯಲ್ಲಿ 15 ದಿನಗಳ ದಸರಾ ರಜೆಯನ್ನು ಇನ್ನೂ 10 ದಿನಗಳವರೆಗೆ ಸಾಧ್ಯತೆಯೊಂದಿಗೆ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ದಸರಾ ಹೊತ್ತಿಗೆ ಹಿಂದುಳಿದ ಆಯೋಗ ಅಸ್ತಿತ್ವದಲ್ಲಿರುವ ಪ್ರಶ್ನಾವಳಿಯಲ್ಲಿ ಬದಲಾವಣೆ ಮಾಡುವುದೂ ಸೇರಿದಂತೆ ತನ್ನ ಪ್ರಾಥಮಿಕ ಕೆಲಸ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಸರ್ಕಾರಿ ಆದೇಶ ಹೊರಡಿಸಿದ ದಿನಾಂಕದಿಂದ ಮೂರು ತಿಂಗಳೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಸರ್ಕಾರ ಉದ್ದೇಶಿಸಿದೆ, ಆದರೆ ಆ ಆದೇಶ ಇನ್ನೂ ಹೊರಬಿದ್ದಿಲ್ಲ ಎಂದು ಸ್ಪಷ್ಟಪಡಿಸಿದರು.
2015 ರ ಕಾಂತರಾಜ್ ಆಯೋಗದ ಸಮೀಕ್ಷೆ ಬದಿಗಿಟ್ಟ ನಂತರ ರಾಜ್ಯ ಸರ್ಕಾರ ಹೊಸ ಸಮೀಕ್ಷೆಗೆ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಯಪ್ರಕಾಶ್ ಹೆಗ್ಡೆ ಆಯೋಗ ಸಲ್ಲಿಸಿದ ಅದರ ವರದಿಯನ್ನು ಇತ್ತೀಚೆಗೆ ತಿರಸ್ಕರಿಸಿ ಹೊಸದಾಗಿ ಸಮೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.
ದಸರಾ ರಜೆಗೆ ರಾಜ್ಯದಲ್ಲಿ ಜಾತಿಗಣತಿ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ದಸರಾ ರಜೆಯನ್ನು ವಿಸ್ತರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.