ಮಂಗಳೂರು: ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕನಾಡಿಯಲ್ಲಿರುವ ಮಾಲ್ ವೊಂದರ ಪಾರ್ಕಿಂಗ್ ನಲ್ಲಿರುವ ಕೊಠಡಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿತ್ತೆನ್ನಲಾದ ಹುಕ್ಕಾ ಬಾರ್ ಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
2023-24ರಲ್ಲಿ ಕೆಫೆಟೇರಿಯಾ ನಡೆಸಲು ಮಂಗಳೂರು ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಿಗೆ ಪಡೆದಿದ್ದ ಆರೋಪಿಗಳು ಕೆಫೆಟೇರಿಯಾ ನೆಪದಲ್ಲಿ ಅಕ್ರಮ ಹುಕ್ಕಾ ಬಾರ್ ನಡೆಸುತ್ತಿದ್ದರು. ಇವರು ನಿಯಮಗಳನ್ನು ಉಲ್ಲಂಘಿಸಿ ಯುವಕರನ್ನು ಮಾದಕ ಭ್ರಮಾ ಲೋಕದಲ್ಲಿ ತೇಲಿಸಿ ಹೆಚ್ಚಿನ ಹಣ ಸಂಪಾದಿಸಿ ಅಪರಾಧವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹುಕ್ಕಾ ಬಾರ್ ನಿಂದ ಹುಕ್ಕಾ ಸೇದುವ ಉಪಕರಣಗಳು, ತಂಬಾಕು ಉತ್ಪನ್ನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ. ನೇತೃತ್ವದಲ್ಲಿ ಪಿಎಸ್ಸೈ ಸುದೀಪ್ ಎಂ.ವಿ., ಶರಣಪ್ಪ ಭಂಡಾರಿ, ಎಎಸ್ಸೈ ಸುಜನ್ ಶೆಟ್ಟಿ ಹಾಗೂ ಸಿಸಿಬಿ ಸಿಬ್ಬಂದಿ ಮತ್ತು ಮಂಗಳೂರು ಪೂರ್ವ ಪೊಲೀಸ್ ಠಾಣಾ ಪಿಎಸ್ಸೈ ಮನೋಹರ್ ಪ್ರಸಾದ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
 
				 
         
         
         
															 
                     
                     
                     
                     
                    


































 
    
    
        