ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಒಪ್ಪಂದದ ಅಡಿಯಲ್ಲಿ 3 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಅದೇ ವೇಳೆ ಒಪ್ಪಂದದ ಅಡಿಯಲ್ಲಿ, ಇಸ್ರೇಲ್ 90 ಪ್ಯಾಲೇಸ್ಟಿನಿಯನ್ ಕೈದಿಗಳು ಮತ್ತು ಬಂಧಿತರನ್ನು ಬಿಡುಗಡೆ ಮಾಡಿದೆ.
ಹಮಾಸ್ ಬಿಡುಗಡೆಯಾದ 3 ಇಸ್ರೇಲಿ ಒತ್ತೆಯಾಳುಗಳೆಲ್ಲರೂ ಮಹಿಳೆಯರೇ ಆಗಿದ್ದಾರೆ. ಇನ್ನು ಇಸ್ರೇಲ್ ಬಂಧಿಸಿರುವ ಹೆಚ್ಚಿನ ಪ್ಯಾಲೆಸ್ತೀನ್ ಕೈದಿಗಳಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಮಕ್ಕಳು ಸೇರಿದ್ದಾರೆ. ಇಸ್ರೇಲ್ ಈ ಪಟ್ಟಿಯಲ್ಲಿರುವ ಎಲ್ಲಾ ಜನರನ್ನು ದೇಶದ ಭದ್ರತೆಗೆ ಸಂಬಂಧಿಸಿದ ಅಪರಾಧಗಳಿಗಾಗಿ ಬಂಧಿಸಿತ್ತು. ಇವರ ವಿರುದ್ಧ ಕಲ್ಲು ಎಸೆಯುವಿಕೆಯಿಂದ ಹಿಡಿದು ಕೊಲೆಯ ಯತ್ನದಂತಹ ಗಂಭೀರ ಆರೋಪಗಳಿವೆ.
ಬಿಡುಗಡೆಯಾದ ಮೂವರು ಒತ್ತೆಯಾಳುಗಳು ತನ್ನ ಸೈನಿಕರೊಂದಿಗೆ ದೇಶದ ಭೂಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂದು ಇಸ್ರೇಲ್ ಮಿಲಿಟಿರಿ ಭಾನುವಾರ ತಿಳಿಸಿದೆ.
ಇತರ ಕೈದಿಗಳನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ? ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಹೀಗೆ ಮುಂದುವರೆದಲ್ಲಿ ಈಗಾಗಲೇ ನಿಗದಿಯಾಗಿರುವ ಜನವರಿ 25 ರಂದು ಮುಂದಿನ ಹಂತದ ಕೈದಿಗಳ ವಿನಿಮಯ ನಡೆಯಲಿದೆ. ಮುಂದಿನ ವಿನಿಮಯದಲ್ಲಿ, ಹಮಾಸ್ 4 ಇಸ್ರೇಲಿ ಮಹಿಳಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ. ಇದರ ನಂತರ, ಪ್ರತಿ ಒತ್ತೆಯಾಳುಗಳಿಗೆ ಬದಲಾಗಿ ಇಸ್ರೇಲ್ 30-50 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆಗೊಳಿಸಿದೆ.