ನವದೆಹಲಿ : ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಬೆನ್ನಲ್ಲೇ ಭಾರತೀಯ ಸೇನೆಗೆ ಫ್ರೀಹ್ಯಾಂಡ್ ನೀಡಲಾಗಿದೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ದೆಹಲಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ಇಂದು ಸಂಜೆ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ, ಕಳೆದ ಕೆಲವು ಗಂಟೆಗಳಿಂದ ಪಾಕಿಸ್ತಾನ ಒಪ್ಪಂದ ಉಲ್ಲಂಘಿಸುತ್ತಿದೆ. ಪಾಕ್ ಪುಂಡಾಟಕ್ಕೆ ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿದೆ. ಕದನ ವಿರಾಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
ಕದನ ವಿರಾಮ ಉಲ್ಲಂಘನೆ ಬಗ್ಗೆ ಸೇನೆ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕದನ ವಿರಾಮ ಒಪ್ಪಂದದಂತೆ ಪಾಕಿಸ್ತಾನ ನಡೆದುಕೊಂಡಿಲ್ಲ. ಒಳನುಸುಳುವಿಕೆ ಅತ್ಯಂತ ಖಂಡನೀಯ. ಪಾಕಿಸ್ತಾನ ಇದಕ್ಕೆ ಕಾರಣವಾಗಿದೆ. ಪಾಕಿಸ್ತಾನವು ಈ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಒಳನುಸುಳುವಿಕೆ ತಡೆಯಲು ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸೇನೆ ಸಂಪೂರ್ಣ ಸಿದ್ಧವಿದೆ ಎಂದು ಪಾಕ್‌ಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನು ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ ಆಗಿರುವ ಬೆನ್ನಲ್ಲೇ ಎಲ್ಲಾ ರಾಜ್ಯಗಳಲ್ಲಿ ಅಲರ್ಟ್ ಆಗಿರುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.