ನವದೆಹಲಿ : ಇತ್ತೀಚೆಗಷ್ಟೇ ಶಂಖ್ ಏರ್ ಸಂಸ್ಥೆಗೆ ವಿಮಾನ ಹಾರಾಟ ಸೇವೆಗೆ ಅನುಮತಿಸಿದ್ದ ಕೇಂದ್ರ ಸರ್ಕಾರ ಇದೀಗ ಇನ್ನೂ ಎರಡು ಸಂಸ್ಥೆಗಳಿಗೆ ನಿರಾಕ್ಷೇಪಣಾ ಪತ್ರ (ಎನ್ಒಸಿ) ಕೊಟ್ಟಿದೆ.
ಕೇರಳ ಮೂಲದ ಅಲ್ ಹಿಂದ್ ಹಾಗೂ ಹೈದರಾಬಾದ್ ಮೂಲದ ಫ್ಲೈ ಎಕ್ಸ್ಪ್ರೆಸ್ ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಎನ್ಒಸಿ ನೀಡಿದೆ. ಈ ಹಿನ್ನೆಲೆ ಭಾರತದ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಹೊಂದಿರುವ ಇಂಡಿಗೋ ಮತ್ತು ಏರ್ ಇಂಡಿಯಾಗೆ ಹೊಡೆತ ಬೀಳುವ ಸಾಧ್ಯತೆ ಇದೆ.
ಈ ಬಗ್ಗೆ ಮಾಹಿತಿ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಿವಿಲ್ ಏವಿಯೇಶನ್ ಮಿನಿಸ್ಟರ್ ರಾಮಮೋಹನ್ ನಾಯ್ಡು ಕಿಂಜರಪು ಅವರು, “ವಿಮಾನಯಾನ ಕ್ಷೇತ್ರದಲ್ಲಿ ಹೊಸ ಸಂಸ್ಥೆಗಳಿಗೆ ಉತ್ತೇಜನ ಕೊಡಲು ಸರ್ಕಾರ ಆದ್ಯತೆ ಕೊಟ್ಟಿದೆ. ಈ ನಿಟ್ಟಿನಲ್ಲಿ, ಕಳೆದ ವಾರದಲ್ಲಿ ಶಂಖ್ ಏರ್, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್ಪ್ರೆಸ್ನ ಪ್ರತಿನಿಧಿಗಳನ್ನು ಭೇಟಿ ಮಾಡಿದೆ. ಶಂಖ್ ಏರ್ಗೆ ಈ ಹಿಂದೆ ಅನುಮತಿಸಲಾಗಿದೆ. ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್ಪ್ರೆಸ್ ಎರಡಕ್ಕೂ ಈ ವಾರ ಎನ್ಒಸಿ ಕೊಡಲಾಗಿದೆ” ಎಂದು ತಿಳಿಸಿದ್ದಾರೆ.
ಕೇರಳದ ಅಲ್ ಹಿಂದ್ ಗ್ರೂಪ್ ಟ್ರಾವಲ್ ಮತ್ತು ಟೂರಿಸಂ ಸೇವೆ ನೀಡುತ್ತವೆ. ಅದರ ವಿಮಾನಗಳು ಕೊರಿಯರ್ ಸೇವೆಗೂ ಬಳಕೆ ಆಗುತ್ತವೆ. ಹೈದರಾಬಾದ್ನ ಫ್ಲೈಎಕ್ಸ್ಪ್ರೆಸ್ ಸಂಸ್ಥೆಯು ಸರಕು ಸಾಗಣೆಯ ವಿಮಾನ ಸೇವೆ ನೀಡುತ್ತದೆ. ಇನ್ನು ಈಗಾಗಲೇ ಎನ್ಒಸಿ ಹೊಂದಿರುವ ಶಂಖ್ ಏರ್ ಸಂಸ್ಥೆ ಸದ್ಯದಲ್ಲೇ ಪ್ರಾದೇಶಿಕ ಮಟ್ಟದಲ್ಲಿ ವಿಮಾನ ಸೇವೆ ಆರಂಭಿಸುವ ನಿರೀಕ್ಷೆಯಿದೆ. ಉತ್ತರಪ್ರದೇಶದ ಲಕ್ನೋ, ವಾರಾಣಸಿ, ಆಗ್ರಾ, ಗೋರಖಪುರ್ ಮೊದಲಾದ ಪ್ರಮುಖ ನಗರಗಳ ನಡುವೆ ಶಂಕ್ ಏರ್ ವಿಮಾನಗಳು ಹಾರಾಟ ನಡೆಸಲಿದೆ.

































