ಹುಬ್ಬಳ್ಳಿ : ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ NLCILಗೆ ಹೂಡಿಕೆ ವಿನಾಯಿತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸಭೆಯಲ್ಲಿ ಹೂಡಿಕೆ ವಿನಾಯಿತಿಗೆ ಅನುಮೋದನೆ ನೀಡಲಾಗಿದೆ. ನವರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಿಗೆ ಅನ್ವಯವಾಗುವಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಹೂಡಿಕೆ ಮಾರ್ಗಸೂಚಿಗಳಿಂದ NLC ಇಂಡಿಯಾ ಲಿ.ಗೆ ವಿಶೇಷ ವಿನಾಯಿತಿ ನೀಡಲಾಗಿದೆ.
ಸಚಿವ ಸಂಪುಟ ಹೂಡಿಕೆ ವಿನಾಯಿತಿಗೆ ಅನುಮೋದನೆ ನೀಡಿದ್ದರಿಂದಾಗಿ NLCIL ಸ್ವಾಮ್ಯದ ಅಂಗಸಂಸ್ಥೆಯಾದ NLC ಇಂಡಿಯಾ ನವೀಕರಿಸಬಹುದಾದ ಲಿಮಿಟೆಡ್ನಲ್ಲಿ 7,000 ಕೋಟಿ ರೂ. ಹೂಡಿಕೆ ಮಾಡಲು ಮತ್ತು ಎನ್ಐಆರ್ಎಲ್ ನೇರವಾಗಿ ಅಥವಾ ಜಂಟಿ ಉದ್ಯಮಗಳ ರಚನೆ ಮೂಲಕ ವಿವಿಧ ಯೋಜನೆಗಳಲ್ಲಿ ಹೂಡಿಕೆಗೆ ಅವಕಾಶವಾಗಲಿದೆ.
2030ರ ವೇಳೆಗೆ 10.11 GW ನವೀಕರಿಸಬಹುದಾದ ಇಂಧನ (RE) ಸಾಮರ್ಥ್ಯ ಅಭಿವೃದ್ಧಿಪಡಿಸುವ ಮತ್ತು 2047ರ ವೇಳೆಗೆ 32 GWಗೆ ವಿಸ್ತರಿಸುವ NLCILನ ಮಹತ್ವಾಕಾಂಕ್ಷೆಯ ಗುರಿಗೆ ಬೆಂಬಲವಾಗಿ ಈ ವಿನಾಯಿತಿ ಘೋಷಣೆ ಮಾಡಲಾಗಿದೆ. ಇದು ನೇರ ಮತ್ತು ಪರೋಕ್ಷವಾಗಿ ಗಮನಾರ್ಹ ಉದ್ಯೋಗಾವಕಾಶ ಸೃಷ್ಟಿಸುವ ನಿರೀಕ್ಷೆಯಿದೆ. ಸಮುದಾಯ ಮತ್ತು ದೇಶದ ಸಮಗ್ರ ಆರ್ಥಿಕ ಬೆಳವಣಿಗೆ ಸಾಕಾರಗೊಳ್ಳಲಿದೆ.
‘ಪಂಚಾಮೃತ’ ಯೋಜನೆ ಗುರಿ ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ದೀರ್ಘಾವಧಿಯ ಬದ್ಧತೆಗೆ ಅನುಗುಣವಾಗಿ 2030ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನ ಸಾಧಿಸಲು ಭಾರತ ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನ ವಲಯ ಮಹತ್ತರ ಹೆಜ್ಜೆ ಇಟ್ಟಿದೆ.