ಹೊಸದಿಲ್ಲಿ: ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯಗಳು ಬುಧವಾರ ಅಣಕು ರಕ್ಷಣಾ ಕವಾಯತುಗಳನ್ನು ನಡೆಸಲಿವೆ. ಯುದ್ಧ ಸಂಭವಿಸಿದರೆ ನಾಗರಿಕರನ್ನು ರಕ್ಷಿಸುವ ಉದ್ದೇಶದಿಂದ ರಕ್ಷಣಾ ಕವಾಯತು ನಡೆಸಲಾಗುತ್ತಿದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರನ್ನು ಪಾಕಿಸ್ಥಾನದ ಉಗ್ರರು ಗುಂಡಿಕ್ಕಿ ಸಾಯಿಸಿದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಬೆನ್ನಲ್ಲೇ ಕೇಂದ್ರದಿಂದ ರಕ್ಷಣಾ ಕವಾಯತು ನಡೆಸಲು ಸೂಚನೆ ಬಂದಿರುವುದು ಮಹತ್ವ ಪಡೆದುಕೊಂಡಿದೆ.
ಮೇ 7ರಂದು ಅಣಕು ರಕ್ಷಣಾ ಕವಾಯತುಗಳನ್ನು ನಡೆಸುವಂತೆ ಕೇಂದ್ರ ಗೃಹ ಸಚಿವ ರಾಜ್ಯಗಳಿಗೆ ನಿರ್ದೇಶನ ನೀಡಿದೆ ಎಂದು ಸರಕಾರಿ ಮೂಲಗಳು ಸೋಮವಾರ ತಿಳಿಸಿವೆ. ಈ ಕವಾಯತಿನಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್ಗಳು ಮತ್ತು ಶತ್ರುಗಳ ದಾಳಿಯ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ನಾಗರಿಕ ರಕ್ಷಣಾ ಅಂಶಗಳ ಕುರಿತು ತರಬೇತಿ ನೀಡುವಂತೆ ಸೂಚಿಸಿದೆ. ದಾಳಿಯ ಸಂದರ್ಭದಲ್ಲಿ ಸಿದ್ಧತೆಯನ್ನು ಪರೀಕ್ಷಿಸಲು ಮತ್ತು ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಬುಧವಾರ ಸಮಗ್ರ ನಾಗರಿಕ ರಕ್ಷಣಾ ಅಣಕು ಕಸರತ್ತುಗಳನ್ನು ನಡೆಸುವಂತೆ ಗೃಹ ಸಚಿವಾಲಯ ರಾಜ್ಯಗಳಿಗೆ ನಿರ್ದೇಶನ ನೀಡಿದೆ
ಇದಲ್ಲದೆ ಕ್ರ್ಯಾಶ್ ಬ್ಲ್ಯಾಕೌಟ್ ಕ್ರಮಗಳನ್ನು ಒದಗಿಸಬೇಕು, ಪ್ರಮುಖ ಸ್ಥಾವರಗಳು ಮತ್ತು ಪ್ರಮುಖ ಕಟ್ಟಡಗಳನ್ನು ಮರೆಮಾಚುವಿಕೆ ಮತ್ತು ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ನಡೆಸುವ ಬಗ್ಗೆ ಪೂರ್ವಾಭ್ಯಾಸ ಮಾಡಬೇಕು ಎಂದು ಹೇಳಿದೆ. ನಿನ್ನೆ ಇಡೀ ದಿನ ಪ್ರಧಾನಿ ಮೋದಿ ರಕ್ಷಣಾಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ. ಆ ಬಳಿಕ ರಕ್ಷಣಾ ಕವಾಯತು ನಡೆಸಲು ರಾಜ್ಯಗಳಿಗೆ ಸೂಚನೆ ರವಾನಿಸಲಾಗಿದ್ದು, ದೊಡ್ಡದೇನೋ ಸಂಭವಿಸಲಿದೆ ಎಂಬ ಸುಳಿವು ನೀಡುತ್ತಿದೆ.