ಮುಂಬೈ : ಟೀಂ ಇಂಡಿಯಾ ಸ್ಟಾರ್ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರು ಪತ್ನಿ ಧನಶ್ರೀ ವರ್ಮಾಗೆ ವಿಚ್ಛೇದನ ನೀಡಲಿದ್ದಾರೆ ಎಂಬ ವದಂತಿ ಕುರಿತು ಧನಶ್ರೀ ಕೊನೆಗೂ ಮೌನ ಮುರಿದಿದ್ದಾರೆ.
2020ರಲ್ಲಿ ಸಪ್ತಪದಿ ತುಳಿದಿದ್ದ ಚಹಲ್ ಹಾಗೂ ಧನಶ್ರೀ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಧನಶ್ರೀ ವಂದತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು, ನನ್ನ ಕುಟುಂಬದ ಸದಸ್ಯರು ಕಳೆದ ಕೆಲ ದಿನಗಳಿಂದ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಕೆಲವರು ಸತ್ಯ ತಿಳಿಯದೇ ಸುಳ್ಳು ಸುಳ್ಳನ್ನೇ ಬರೆಯುತ್ತಿದ್ದಾರೆ. ನನ್ನ ಖ್ಯಾತಿಗೆ ಕಳಂಕ ತರಲು ಆಧಾರರಹಿತ ಬರವಣಿಗೆ, ಸತ್ಯ-ಪರಿಶೋಧವಿಲ್ಲದ ಬರಹಗಳು ಮತ್ತು ದ್ವೇಷ ಹರಡುವ ಟ್ರೋಲ್‌ಗಳನ್ನು ಮಾಡುತ್ತಿದ್ದಾರೆ. ಹಲವು ವರ್ಷಗಳ ಕಾಲ ಶ್ರಮಿಸಿದ ನಂತರವೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾನು ಮೌನವಾಗಿದ್ದ ಮಾತ್ರಕ್ಕೆ, ಅದು ನನ್ನ ದೌರ್ಬಲ್ಯ ಎಂದು ಭಾವಿಸಬೇಡಿ ಎಂದು ಪೋಸ್ಟ್ ಮಾಡಿದ್ದಾರೆ.
ಇತರರಿಗೆ ಸಹಾನುಭೂತಿ ತೋರಿಸಲು ಧೈರ್ಯ ಬೇಕು. ನೈಜ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಮೌಲ್ಯಗಳೊಂದಿಗೆ ಮುಂದುವರಿಯುವುದರಲ್ಲಿ ನಾನು ನಂಬಿಕೆ ಇಡುತ್ತೇನೆ. ಇಲ್ಲಿ ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ನಾನು ನನ್ನ ಸತ್ಯದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಮೌಲ್ಯಗಳನ್ನು ಹಿಡಿದಿಟ್ಟುಕೊಂಡು ಮುಂದುವರಿಯುವುದನ್ನು ಆಯ್ಕೆ ಮಾಡುತ್ತೇನೆ. ಯಾವುದೇ ಸಾಕ್ಷ್ಯಗಳಿಲ್ಲಿದ್ರೂ ಸತ್ಯವು ಅದರ ಸ್ಥಾನದಲ್ಲಿ ದೃಢವಾಗಿ ನಿಂತಿದೆ. ಓಂ ನಮಃ ಶಿವಾಯ ಎಂದು ಬರೆದುಕೊಂಡಿದ್ದಾರೆ.
ಧನಶ್ರೀ ಅವರು ಈ ರೀತಿಯಾಗಿ ಪೋಸ್ಟ್ ಮಾಡಿದ ಬೆನ್ನಲ್ಲೇ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿದೆ. ಈ ಪೋಸ್ಟ್ ನಲ್ಲಿ ಚಹಲ್ ಅವರ ಹೆಸರನ್ನೂ ಪ್ರಸ್ತಾಪಿಸಿಲ್ಲ ಎಂದು ನೆಟ್ಟಿಗರು ಚರ್ಚೆ ನಡೆಯುತ್ತಿದ್ದಾರೆ.