ನವದೆಹಲಿ : ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ ಸಿಯಲ್ಲಿ ತೇರ್ಗಡೆಯಾಗುವುದು ಕಷ್ಟಸಾಧ್ಯ. ಈ ಪರೀಕ್ಷೆಯನ್ನು ಕೇವಲ 22 ವರ್ಷ ವಯಸ್ಸಿನಲ್ಲೇ 28ನೇ ಅಖಿಲ ಭಾರತೀಯ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿ ಚಂದ್ರಜ್ಯೋತಿ ಸಿಂಗ್ ಅವರು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಮಾದರಿಯಾಗಿದ್ದಾರೆ.
ಚಂದ್ರಜ್ಯೋತಿ ಅವರು ನಿವೃತ್ತ ಸೇನಾಧಿಕಾರಿಗಳಾದ ಕರ್ನಲ್ ದಲ್ಬಾರ ಸಿಂಗ್ ಮತ್ತು ಲೆಫ್ಟಿನೆಂಟ್ ಕರ್ನಲ್ ಮೀನ್ ಸಿಂಗ್ ಅವರ ಪುತ್ರಿ. ಶಿಸ್ತುಬದ್ಧ ವಾತಾವರಣದಲ್ಲಿ ಬೆಳೆದ ಅವರು, ತಮ್ಮ ಗುರಿಗಳನ್ನು ದೃಢತೆ ಮತ್ತು ಕಠಿಣ ಪರಿಶ್ರಮದಿಂದ ಮುಂದುವರಿಸಲು ಪೋಷಕರು ಪ್ರೋತ್ಸಾಹ ನೀಡಿದರು.
ಚಂದ್ರಜ್ಯೋತಿ ಅವರು ಜಲಂಧರ್ನ ಎಪಿಜೆ ಶಾಲೆಯಲ್ಲಿ 10ನೇ ತರಗತಿಯಲ್ಲಿ ಪೂರ್ಣ 10 ಸಿಜಿಪಿಎ ಪಡೆದರು. ಮತ್ತು ಚಂಡೀಗಢದ ಭವನ್ ವಿದ್ಯಾಲಯದಿಂದ 12ನೇ ತರಗತಿಯ ಪರೀಕ್ಷೆಯಲ್ಲಿ 95.4% ಅಂಕ ಗಳಿಸಿದರು. ನಂತರ 2018 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ ಪದವಿ ಪಡೆದ ಅವರು 7.75 ಸಿಜಿಪಿಎ ಗಳಿಸಿದರು. ಅವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಹೊಂದಿದ್ದಾರೆ.
ಪದವಿಯ ನಂತರ, ಚಂದ್ರಜ್ಯೋತಿ ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ಒಂದು ವರ್ಷ ವಿರಾಮ ತೆಗೆದುಕೊಂಡರು. ಪ್ರತಿದಿನ 6-8 ಗಂಟೆಗಳ ಕಾಲ ತಮ್ಮ ಅಧ್ಯಯನಕ್ಕೆ ಮೀಸಲಿಟ್ಟರು. ಅವರ ಶಿಸ್ತುಬದ್ಧ ವಿಧಾನವು ಫಲವಾಗಿ 2019 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ 28ನೇ ರ್ಯಾಂಕ್ ಪಡೆದರು.
ಪ್ರಸ್ತುತ ಐಎಎಸ್ ಚಂದ್ರಜ್ಯೋತಿ ಸಿಂಗ್ ಅವರು ಪಂಜಾಬ್ನ ರೂಪನಗರದಲ್ಲಿ (ರೋಪರ್) ಹೆಚ್ಚುವರಿ ಜಿಲ್ಲಾಧಿಕಾರಿ (ಗ್ರಾಮೀಣಾಭಿವೃದ್ಧಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.