ಹೈದರಾಬಾದ್ :ʻಪುಷ್ಪ 2′ ಸಿನಿಮಾ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈದರಾಬಾದ್ ಪೊಲೀಸರು ಇಂದು ನಾಂಪಲ್ಲಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ ನಟ ಅಲ್ಲು ಅರ್ಜುನ್ ಸೇರಿ 23 ಜನರ ಹೆಸರು ಉಲ್ಲೇಖಿಸಿದ್ದಾರೆ.
2024ರ ಡಿಸೆಂಬರ್ 4 ರಂದು ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ ‘ಪುಷ್ಪ 2: ದಿ ರೂಲ್’ ಸಿನಿಮಾದ ಪ್ರೀಮಿಯರ್ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ ತಮ್ಮ ನೆಚ್ಚಿನ ನಟ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಿಂದಾಗಿ 35 ವರ್ಷದ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದರು. ಅವರ ಪುಟ್ಟ ಮಗ ಶ್ರೀತೇಜ್ ಆಮ್ಲಜನಕದ ಕೊರತೆಯಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿ ದೀರ್ಘಕಾಲದವರೆಗೆ ಹಾಸಿಗೆ ಹಿಡಿದಿದ್ದಾರೆ.
ಪೊಲೀಸರು ಒಟ್ಟು 23 ಜನರನ್ನ ಆರೋಪಿಗಳೆಂದು ಹೆಸರಿಸಿದ್ದಾರೆ. ಇದರಲ್ಲಿ ಅಲ್ಲು ಅರ್ಜುನ್ 11ನೇ ಆರೋಪಿ (A-11) ಆಗಿದ್ದಾರೆ. ಚಿತ್ರಮಂದಿರದ ಆಡಳಿತ ಮಂಡಳಿಯನ್ನ ಪ್ರಮುಖ ಆರೋಪಿ (A-1) ಎಂದು ಉಲ್ಲೇಖಿಸಲಾಗಿದೆ.
ಅಪಾಯಕಾರಿ ಜನಸಂದಣಿ ಇರುವುದು ತಿಳಿದಿದ್ದರೂ ನಟ ಅಲ್ಲಿಗೆ ಭೇಟಿ ನೀಡಿದ್ದು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸರಿಯಾದ ಸಮನ್ವಯ ಸಾಧಿಸದ ಕಾರಣ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
































