ಬೆಂಗಳೂರು : ಕೋಮು ದ್ವೇಷ ಸಂಬಂಧಿಸಿದ ಪ್ರಕರಣದಲ್ಲಿ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್ಗೆ ಹೇಳಿದೆ.
ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಆನಂತರ ಕಾನೂನು ಪ್ರಕ್ರಿಯೆ ರದ್ದತಿ ಕೋರಿ ಹರೀಶ್ ಪೂಂಜ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ರಜಾಕಾಲೀನ ಏಕಸದಸ್ಯ ಪೀಠವು ಮಂಗಳವಾರ ನಡೆಸಿತು. ಪೂಂಜ ಪರ ವಕೀಲರು ಇದು ವಿಶೇಷ ನ್ಯಾಯಾಲಯದ ಪ್ರಕರಣವಾಗಿದ್ದು, ಅರ್ಜಿದಾರರು ಹಾಲಿ ಶಾಸಕರಾಗಿದ್ದಾರೆ. ಉಪ್ಪಿನಂಗಡಿಯಲ್ಲಿ ಎಫ್‌ಐಆರ್ ದಾಖಲಿಸಿ, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನಮಗೆ ಯಾವುದೇ ದಾಖಲೆ ದೊರೆತಿಲ್ಲ. ಈ ನಡುವೆ ಅತ್ಯಂತ ಕಡಿಮೆ ಅವಧಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆರೋಪ ಪಟ್ಟಿ ಸಲ್ಲಿಸಲು ಪೊಲೀಸರಿಗೆ ಸ್ವಾತಂತ್ರ‍್ಯವಿದೆ. ಆದರೆ ಇದು ಸರಿಯಾದ ವಿಧಾನವಲ್ಲ. ಹೀಗಾಗಿ ಬಲವಂತದ ಕ್ರಮಕೈಗೊಳ್ಳದಂತೆ ಆದೇಶಿಸಬೇಕು ಮತ್ತು ಆರೋಪ ಪಟ್ಟಿಯ ಪ್ರತಿ ನೀಡಲು ಆದೇಶಿಸಬೇಕು ಎಂದು ತಿಳಿಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ. ಎನ್. ಜಗದೀಶ್ ಅವರು ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಇಂದು ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ತನಿಖಾಧಿಕಾರಿ ಸಲ್ಲಿಸಿದ್ದಾರೆ. ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಪೂಂಜ ಅವರು ಹೊಸ ಅರ್ಜಿ ಸಲ್ಲಿಸಬೇಕು, ಇಲ್ಲವೇ ಅದನ್ನು ತಿದ್ದುಪಡಿ ಮಾಡಬೇಕು ಎಂದು ತಿಳಿಸಿದರು.
ದೂರುದಾರ ಎಸ್ ಬಿ ಇಬ್ರಾಹಿಂ ಪರ ವಕೀಲರು ವಾದ ಮಂಡಿಸಿ, ಈ ಹಿಂದೆ ಪೂಂಜ ಅವರು ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಸಾರ್ವಜನಿಕವಾಗಿ ಅವರು ಬಳಕೆ ಮಾಡಿರುವ ಭಾಷೆಯನ್ನು ನ್ಯಾಯಾಲಯ ನೋಡಬೇಕು. ಈ ಪ್ರಕರಣ ದಾಖಲಾದ ಬಳಿಕ ಹರೀಶ್ ಪೂಂಜ ಅವರು ಬಹಿರಂಗವಾಗಿ ‘ಇನ್ನೂ ನೂರು ಪ್ರಕರಣವನ್ನು ಸರ್ಕಾರ ದಾಖಲಿಸಲಿ. ಅದಕ್ಕೆಲ್ಲ ಹೆದರುವ ವ್ಯಕ್ತಿ ನಾನಲ್ಲ’ ಎಂದು ಹೇಳಿದ್ದರು. ಇಂತಹ ಕೋಮು ಭಾಷಣದಿಂದ ಕೊಲೆಗಳು ನಡೆಯುತ್ತಿವೆ. ಅವರು ವಿಷ ಉಗುಳುತ್ತಿದ್ದಾರೆ ಎಂದು ಆರೋಪಿಸಿದರು.
ಎಲ್ಲವನ್ನು ಆಲಿಸಿದ ನ್ಯಾಯಪೀಠವು ಪೂಂಜ ಪರ ವಕೀಲರಿಗೆ ತಿದ್ದುಪಡಿ ಅರ್ಜಿ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ಮೇ 22ಕ್ಕೆ ಮುಂದೂಡಿತು.
 
				 
         
         
         
															 
                     
                     
                     
                     
                    



































 
    
    
        