ಬೆಂಗಳೂರು : ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ಆರೋಪ ಸಂಬಂಧ ವಿಶೇಷ ತನಿಖಾ ತಂಡ ಬೆಂಗಳೂರು ನಗರದ ಎಪಿಎಂಎಂ ನ್ಯಾಯಾಲಯಕ್ಕೆ ದೋಷರೋಪಟ್ಟಿ ಶುಕ್ರವಾರ ಚಾರ್ಜ್‌ಶೀಟ್ ಸಲ್ಲಿಸಿದೆ.
ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಸೇರಿದಂತೆ ಒಟ್ಟು 7 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿದ್ದ ಮತಗಳ್ಳತನ ಪ್ರಕರಣದಲ್ಲಿ ಸುಭಾಷ್ ಗುತ್ತೇದಾರ್ ಪಾತ್ರವಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದ ಆದೇಶದಂತೆ ಸಿಐಡಿ ಎಡಿಜಿಪಿ ಬಿಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಬಳಿಕ ಸುಮಾರು 22 ಸಾವಿರ ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದರು. ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಷಯವನ್ನು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಪ್ರಸ್ತಾಪಿಸಿ ಆರೋಪ ಮಾಡಿದ್ದರು.
































