ಹೊಳಲ್ಕೆರೆ : ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ತಡೆಯುವುದಕ್ಕಾಗಿ ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲಿ ಚೆಕ್ಡ್ಯಾಂ ಕಟ್ಟಿಸಿರುವುದರ ಪರಿಣಾಮ ಬೋರ್ವೆಲ್ಗಳಲ್ಲಿ ನೀರು ಉಕ್ಕುತ್ತಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲ್ಲೂಕಿನ ಕುಮ್ಮಿನಘಟ್ಟ ಗ್ರಾಮದಲ್ಲಿ ಎರಡು ಕೋಟಿ ಹತ್ತು ಲಕ್ಷ ರೂ.ವೆಚ್ಚದಲ್ಲಿ ನೂತನ ಚೆಕ್ಡ್ಯಾಂ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ಮೂವತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಭರಮಸಾಗರ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ಸರಿಯಾದ ರಸ್ತೆಯಿರಲಿಲ್ಲ. ನಾಲ್ಕೈದು ಕಿ.ಮೀ. ನಡೆದು ಹೋಗಿ ಮತ ಕೇಳಿದ್ದೇನೆ. ಗೆದ್ದ ನಂತರ 386 ಹಳ್ಳಿಗಳಲ್ಲಿ ರಸ್ತೆ ನಿರ್ಮಿಸಿದ್ದರಿಂದ ಮತದಾರರು ರಸ್ತೆ ರಾಜ ಎಂಬ ಬಿರುದು ನೀಡಿ ಎರಡನೆ ಬಾರಿಗೂ ನನ್ನನ್ನು ಗೆಲ್ಲಿಸಿದರು. ಜನರ ಹೆಗಲ ಮೇಲೆ ಕೈಹಾಕಿಕೊಂಡು ನಾಟಕ ಮಾಡಿಕೊಂಡು ತಿರುಗಾಡುವ ರಾಜಕಾರಣಿ ನಾನಲ್ಲ. ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ತಿಳಿದು ಎಲ್ಲೆಲ್ಲಿ ಏನೇನೂ ಅಭಿವೃದ್ದಿ ಕೆಲಸವಾಗಬೇಕೆಂಬುದನ್ನು ಗಮನಿಸಿ ಹಗಲು-ರಾತ್ರಿ ಪ್ರಾಮಾಣಿಕವಾಗಿ ಮತದಾರರ ಸೇವೆ ಮಾಡುತ್ತಿದ್ದೇನೆಂದರು.
ತಾಲ್ಲೂಕಿನಾದ್ಯಂತ ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿದ್ದೇನೆ. ಗುಣ ಮಟ್ಟದ ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆಗಳ ನಿರ್ಮಾಣ, ಮುರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರುರಾಣಿ ಚೆನ್ನಮ್ಮ ಶಾಲೆ, ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಸ್ವಂತ ಖರ್ಚಿನಿಂದ ಬಸ್ಗಳನ್ನು ನೀಡಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನೂ ಇಂತಹ ಪುಣ್ಯದ ಕೆಲಸ ಮಾಡಿಲ್ಲ. ಇನ್ನು ನೂರು ವರ್ಷಗಳ ಕಾಲ ರೈತರಿಗೆ ವಿದ್ಯುತ್ ಸಮಸ್ಯೆಯಾಗಬಾರದೆಂದು ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಐದು ನೂರು ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದ್ದು, ಜೋಗ್ಫಾಲ್ಸ್ನಿಂದ ನೇರವಾಗಿ ವಿದ್ಯುತ್ ಪೂರೈಕೆಯಾಗಲಿದೆ. ಎಲ್ಲಾ ಕಡೆ ನೀರಿನ ಟ್ಯಾಂಕ್ಗಳನ್ನು ಕಟ್ಟಿಸಿದ್ದೇನೆ. ಇನ್ನೆರಡು ತಿಂಗಳಲ್ಲಿ ಚೆಕ್ಡ್ಯಾಂ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಂಜಿನಿಯರ್ಗಳಿಗೆ ಶಾಸಕ
ಎಂ.ಚಂದ್ರಪ್ಪ ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಲಮ್ಮ ನಟರಾಜ್, ಸದಸ್ಯರುಗಳಾದ ರಮೇಶ್, ಚಂದ್ರಪ್ಪ, ತಿಮ್ಮಪ್ಪ, ಮಂಜುನಾಥ, ಕರಿಯಪ್ಪ, ಬಸವರಾಜ್, ರಾಜಪ್ಪ, ವೆಂಕಟೇಶ್
ತಿಮ್ಮಪ್ಪ, ರುದ್ರಪ್ಪ, ಲೋಕೇಶ್, ತಮ್ಮಣ್ಣ, ರುದ್ರಪ್ಪ, ಗಿರೀಶ್, ಕರಿಬಸಪ್ಪ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ಗಳಾದ ನಾಗರಾಜ್, ಶರಣಪ್ಪ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿದ್ದರು.