ಚಿಕ್ಕಮಗಳೂರು: ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಎದುರು 6 ಮಂದಿ ನಕ್ಸಲರು ಶರಣಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದರು. ಈ ಶರಣಗತಿಯ ಹಿಂದೆ ದನ ಕಾಯುವ ಆದಿವಾಸಿ ಮಹಿಳೆಯ ಪರಿಶ್ರಮವಿದೆ.
ಹೌದು ದನ ಕಾಯುವ ಆದಿವಾಸಿ ಮಹಿಳೆ ಗೌರಮ್ಮ ಎಂಬುವರು ನಕ್ಸಲರ ಮಧ್ಯೆ ಸಂಪರ್ಕ ಸಾಧಿಸಿ ಸುದ್ದಿ ಮುಟ್ಟಿಸುವ ಕೆಲಸ ಮಾಡಿ ನಕ್ಸಲ್ ಶರಣಾಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಎಂಬ ಕುತೂಹಲಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ದನ ಕಾಯುವ ವೇಳೆ ಗೌರಮ್ಮ ಅವರು ನಕ್ಸಲರ ಸಂಪರ್ಕಕ್ಕೆ ಬಂದಿದ್ದರು. ಆಗ ನಕ್ಸಲರು ತಮ್ಮ ಸಂಪರ್ಕಕ್ಕೆ ಬಂದ ಗೌರಮ್ಮ ಅವರನ್ನು ಸಂಪೂರ್ಣವಾಗಿ ನಂಬಿದ್ದರು.
ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರುವ ಸಂಬಂಧ ಒಲವು ತೋರಿ ಪತ್ರವೊಂದನ್ನು ಗೌರಮ್ಮ ಮೂಲಕ ಸರ್ಕಾರದೊಂದಿಗೆ ಸಂಧಾನಕ್ಕೆ ಸಮರ್ಥರಾದ ವ್ಯಕ್ತಿಯೊಬ್ಬರಿಗೆ ತಲುಪಿಸಿದ್ದರು.
ಬಳಿಕ ಗೌರಮ್ಮ ಅವರು ಸರ್ಕಾರದ ನಕ್ಸಲ್ ಪುನರ್ವಸತಿ ಸಮಿತಿ ಪ್ರತಿನಿಧಿಗಳಿಗೆ ವಿಷಯ ಮುಟ್ಟಿಸಿದ್ದರು. ಅಂದಿನಿಂದಲೇ ಸಂಧಾನ ಪ್ರಕ್ರಿಯೆ ಆರಂಭವಾಗಿತ್ತು ಎನ್ನಲಾಗಿದೆ. ಹಲವು ಸುತ್ತಿನ ಪತ್ರ ವ್ಯವಹಾರ ನಡೆದಿತ್ತು.
ಕೆಲ ಬಾರಿ ಸಂಧಾನ ಸಮಿತಿಯ ಪತ್ರಗಳನ್ನೂ ಗೌರಮ್ಮ ಅವರು ನಕ್ಸಲರಿಗೆ ತಲುಪಿಸಿದ್ದರು ಎಂದು ತಿಳಿದು ಬಂದಿದೆ.