ಮುಂಡಗಾರು ಲತಾ ನೇತೃತ್ವದಲ್ಲಿ ಆರು ಮಂದಿ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಸರ್ಕಾರದ ಸೂಚನೆಯಂತೆ ನಾಳೆ ಶರಣಾಗಲು ನಿರ್ಧರಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ನಕ್ಸಲ್ ನಾಯಕಿ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ.ಅಲಿಯಾಸ್ ರಮೇಶ ಮತ್ತು ಆಂಧ್ರಪ್ರದೇಶದ ಮಾರೆಪ್ಪ ಅರೋಲಿ ಸೇರಿದಂತೆ ಆರು ಮಂದಿ ನಕ್ಸಲರು ಶರಣಾಗಲಿದ್ದಾರೆ.
ಶರಣಾಗುವ ಮುನ್ನ ನಕ್ಸಲರು ಸರ್ಕಾರಕ್ಕೆ ಅಂದರೆ ಶಾಂತಿ ನಾಗರಿಕರ ವೇದಿಕೆ ಮತ್ತು ನಕ್ಸಲ್ ಪುನರ್ವಸತಿ ಸಮಿತಿಗೆ ಬರೆದಿರುವ ಪತ್ರದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ, ತಮ್ಮ ಮೇಲಿನ ಸುಳ್ಳು ಕೇಸ್‌ಗಳನ್ನು ಖುಲಾಸೆಗೊಳಿಸುವುದು ಮತ್ತು ವಿಕ್ರಂಗೌಡ ಎನ್‌ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದಾರೆ.
ಆರು ಜನರಾದ ನಾವು ಸಂಪೂರ್ಣ ಸಮ್ಮತಿ ಮತ್ತು ಏಕ ಅಭಿಪ್ರಾಯದ ಮೇರೆಗೆ ಈ ಪತ್ರವನ್ನು ತಮಗೂ ಆ ಮೂಲಕ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಸರ್ಕಾರಗಳಗೆ ಬರೆಯುತ್ತಿದ್ದೇವೆ
ನಾವು ಯಾವುದೇ ಒತ್ತಡವಿಲ್ಲದೆ. ಸ್ವ-ಇಚ್ಛೆಯಿಂದ ಮುಖ್ಯವಾಹಿನಿಗೆ ಬರಲು ಬಯಸುತ್ತಿದ್ದೇವೆ. ಆದರೆ ಈ ಸಂದರ್ಭದಲ್ಲಿ ಕೆಲವು ಖಚಿತ ಸ್ಪಷ್ಠೀಕರಣವನ್ನು ಸರ್ಕಾರ ಮತ್ತು ಸಂಬಂಧಿತ ಸಮಿತಿಯಿಂದ ಬಯಸುತ್ತಿದ್ದೇವೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
ನಾವು ಹೋರಾಟದ ಮಾರ್ಗವನ್ನು ಬದಲಾಯಿಸಿದ್ದೇವೆ. ಆದರೆ, ಜನಪರ ಹೋರಾಟವನ್ನು ಕೈ ಬಿಡುತ್ತಿಲ್ಲ. ಹೀಗಾಗಿ ಪ್ರಜಾತಾಂತ್ರಿಕ ಚಳುವಳಿಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾವುದೇ ರೀತಿಯ ತಡೆ ಒಡ್ಡಬಾರದು. ನಮ್ಮ ಬದುಕನ್ನು ಜನತೆಗೆ ಮುಡುಪಿಟ್ಟಿದ್ದೇವೆ. ಜನ ಹಿತಕ್ಕಾಗಿಯೇ ಬದುಕಲು ಬಯಸುತ್ತೇವೆ.
ನಾವು ಇಲ್ಲಿಂದ ಹೊರ ಬಂದು ಜೈಲುಗಳಲ್ಲಿ ಕೊಳೆಯುವ ಮನಸ್ಥಿತಿ ಎದುರಾಗಬಾರದು. ನಮ್ಮ ಮೇಲೆ ಹಾಕಿರುವ ಹೆಚ್ಚಿನ ಪಾಲು ಕೇಸುಗಳು ಯಾವುದೇ ಅನುಮಾನವಿಲ್ಲದೆ ಸುಳ್ಳು ಕೇಸುಗಳಾಗಿವೆ. ನಾವು ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲದ ಪ್ರಕರಣಗಳಲ್ಲಿ ನಮ್ಮ ಹೆಸರುಗಳನ್ನು ಸೇರಿಸಲಾಗಿದೆ.
ಮುಖ್ಯವಾಹಿನಿಗೆ ಬಂದ ನಂತರ ಬೇಗನೆ ಜಾಮೀನಿನ ಮೇಲೆ ಹೊರ ಬರಲು ಸಹಕರಿಸಬೇಕು ಎಲ್ಲ ಮೊಕದ್ದಮೆಗಳನ್ನು ಒಂದೇ ನ್ಯಾಯಾಲಯದ ಅಡಿ ತಂದು ತ್ವರಿತ ವಿಚಾರಣೆ ನಡೆಯುವಂತೆ ಮಾಡಬೇಕು.
ಕೇಸುಗಳನ್ನು ನಡೆಸಲು ಕಾನೂನು ಹಾಗೂ ಆರ್ಥಿಕ ನೆರವು ಒದಗಿಸುವ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು.
ಈಗಾಗಲೇ ಮುಖ್ಯವಾಹಿನಿಗೆ ಬಂದ ಹಲವರ ಬದುಕು ಅತಂತ್ರವಾಗಿದೆ. ಅವರ ಕೇಸುಗಳ ಇತ್ಯರ್ಥಕ್ಕೆ ಹಾಗೂ ಬದುಕಿನ ಭದ್ರತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು.
ಬೇರೆ ಬೇರೆ ಜೈಲುಗಳಲ್ಲಿರುವ ಸಂಗಾತಿಗಳಿಗೂ (ಅವರು ಬಂಧನಕ್ಕೊಳಗಾಗಿದ್ದರೂ ಸಹ) ಈ ಪ್ಯಾಕೇಜ್ ಅನ್ವಯ ಆಗುವಂತೆ ಮಾಡಿ ಅವರ ಬಿಡುಗಡೆಗೆ ಸಹಕರಿಸಬೇಕು.
ಹೊರ ಬಂದ ನಂತರ ನಮ್ಮ ಜೀವನಕ್ಕೆ ದಾರಿ ಏನು ಎಂಬ ಸ್ಪಷ್ಟತೆ ಬೇಕು.
ಡಿಸಿಎಂ ವಿಕ್ರಮಗೌಡ ಅವರ ಎನ್‌ಕೌಂಟರ್ ಹತ್ಯೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶ ಮಾಡಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.