ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಫೋಟೋ ಮತ್ತು ವೀಡಿಯೊಗಳನ್ನು ಹಣ ಗಳಿಸುವ ಸಾಧನಗಳಾಗಿ ಬಳಸುತ್ತಿರುವ ಹೆಚ್ಚುತ್ತಿರುವ ಪ್ರವೃತ್ತಿ ದೇಶದ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ ಎಂದು ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯ ಶೂನ್ಯ ಸಮಯದಲ್ಲಿ ಮಾತನಾಡಿದ ಅವರು, ಪೋಷಕರು ತಮ್ಮ ಮುಗ್ಧ ಮಕ್ಕಳನ್ನು ರೀಲ್ಗಳು, ಶಾರ್ಟ್ ವೀಡಿಯೊಗಳು ಮತ್ತು ಜಾಹೀರಾತುಗಳ ಭಾಗವಾಗಿ ಬಳಸಿ ಆದಾಯ ಗಳಿಸುವುದು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವಂತಿದೆ ಎಂದು ಹೇಳಿದ್ದಾರೆ. ಅನೇಕ ಪೋಷಕರು ತಮ್ಮ ಮಗುವಿಗೆ ವಿವಿಧ ವೇಷಭೂಷಣ ಹಾಕಿ, ಆಕರ್ಷಕ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಲಕ್ಷಾಂತರ ಫಾಲೋವರ್ಗಳನ್ನು ಗಳಿಸುತ್ತಿದ್ದಾರೆ. “ಇದು ಪೋಷಕರಿಗೆ ಆದಾಯ ತರಬಹುದು, ಆದರೆ ಮಕ್ಕಳ ಮನೋವಿಜ್ಞಾನಕ್ಕೆ ದೀರ್ಘಕಾಲೀನ ಹಾನಿ ಉಂಟುಮಾಡುತ್ತದೆ,” ಎಂದು ಹೇಳಿದರು.
ಮಕ್ಕಳ ಚಿತ್ರಣಕ್ಕೆ ಕಠಿಣ ನಿಯಮಗಳನ್ನು ಜಾರಿಗೆ ತಂದಿರುವ ಫ್ರಾನ್ಸ್ ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳ ಉದಾಹರಣೆ ನೀಡಿದ ಸುಧಾ ಮೂರ್ತಿ, ಭಾರತದಲ್ಲೂ ಇದೇ ರೀತಿಯ ಕಾನೂನುಗಳು ಅಗತ್ಯವಿವೆ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಮಕ್ಕಳು ಶಿಕ್ಷಣ, ಕ್ರೀಡೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಬೆಳೆಯ ಬೇಕು, ಆದರೆ ಸೋಷಿಯಲ್ ಮೀಡಿಯಾ ಕೀರ್ತಿಗಾಗಿ ಅವರನ್ನು ಬಳಸುವುದು ಅವರ ಮುಗ್ಧತೆಯನ್ನು ಕಳೆದುಹೋಗುವಂತೆ ಮಾಡುತ್ತದೆ ಎಂದು ಸುಧಾ ಮೂರ್ತಿ ಹೇಳಿದರು.
“ಇಂತಹ ಅನಿಯಂತ್ರಿತ ಕಾರ್ಯಗಳು ಮುಂದಿನ ದಿನಗಳಲ್ಲಿ ಮಕ್ಕಳ ವ್ಯಕ್ತಿತ್ವ, ವರ್ತನೆ ಮತ್ತು ಮನೋವಿಜ್ಞಾನಕ್ಕೆ ದೊಡ್ಡ ಸಮಸ್ಯೆಯನ್ನುಂಟುಮಾಡಬಹುದು,” ಎಂದು ಅವರು ಎಚ್ಚರಿಸಿದರು. ಸೋಷಿಯಲ್ ಮೀಡಿಯಾವನ್ನು ಸರಿಯಾದ ರೀತಿಯಲ್ಲಿ ಬಳಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದ ಅವರು, “ಸಾಮಾಜಿಕ ಮಾಧ್ಯಮ ಒಂದು ಚಾಕುವಿನಂಥದು. ಅದರಿಂದ ಹಣ್ಣು ಕತ್ತರಿಸಬಹುದು, ಇಲ್ಲವೇ ವ್ಯಕ್ತಿಯನ್ನು ಗಾಯಗೊಳಿಸಬಹುದು. ಬಳಸುವ ರೀತಿ ಮುಖ್ಯ. ಆದರೆ ಮಕ್ಕಳ ಬಾಲ್ಯವನ್ನು ಬಲಿಕೊಡಬೇಡಿ,” ಎಂದು ಮನವಿ ಮಾಡಿದರು.

































