ಚಿತ್ರದುರ್ಗ: ಪ್ರಸ್ತುತ ದಿನಮಾನದಲ್ಲಿ ಶಿಕ್ಷಣದಲ್ಲಿ ಮಕ್ಕಳಿಗೆ ಕೇವಲ ಅಂಕ ಗಳಿಕೆ ಬಗ್ಗೆ ಮಾತ್ರವ ಕಲಿಸಲಾಗುತ್ತಿದ್ದು ಪ್ರತಿಶಾಲೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಅವಶ್ಯಕತೆ ಇದೆ ಎಂದು ಆರ್ಯ ಈಡಿಗ ಮಹಾಸಂಸ್ಥಾನ ಸೋಲುರು ಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿಗಳು ಹೇಳಿದರು.
ನಗರದ ದೊಡ್ಡಪೇಟೆಯಲ್ಲಿರುವ ಜ್ಞಾನ ಕುಟೀರ ಪ್ರಿ ಪ್ರೈಮರಿ ಶಾಲೆ, ಹಳೆ ಸಂಪಿಗೆ ಸಿದ್ದೇಶ್ವರ ಶಾಲಾ ಆವರಣದಲ್ಲಿ ಮಾರ್ಚ್ 28ರ ಶುಕ್ರವಾರ ರಾತ್ರಿ ಬ್ರಹ್ಮಶ್ರೀ ಜ್ಞಾನಕುಟೀರ ಶಿಕ್ಷಣ ಮತ್ತು ಕಲಾ ಸಾಂಸ್ಕೃತಿಕ ಸಂಸ್ಥಾನ ಚಿತ್ರದುರ್ಗ ವತಿಯಿಂದ ಹಮ್ಮಿಕೊಂಡಿದ್ದ ಜ್ಞಾನಕುಟೀರೋತ್ಸವ ಮತ್ತು ಬ್ರಹ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಮ್ಮ ಶ್ರೀ ಮಠದಲ್ಲಿ ಮೂವತ್ತು ವರ್ಷಗಳಿಂದ ಸಾವಿರಾರು ಮಕ್ಕಳಿಗೆ ಸಂಸ್ಕಾರ ಕಲಿಸಲಾಗುತ್ತದೆ. ಪೋಷಕರು ರಜೆಯ ದಿನಗಳಲ್ಲಿ ಮಕ್ಕಳನ್ನು ಹೆಚ್ಚು ನಿದ್ದೆಮಾಡಲು ಬಿಡದೇ ಸೂರ್ಯ ಉದಯಿಸುವ ಮುನ್ನ ಬೇಗನೇ ಎಬ್ಬಿಸಿದರೆ ಅದು ಉತ್ತಮ ಆರೋಗ್ಯ ಕೊಡುತ್ತದೆ. ಮಿದುಳು ಮತ್ತು ದೇಹ ಬೆಳವಣಿಗೆ ಸಹಕಾರಿಯಾಗುತ್ತದೆ. ಕನ್ನಡ ಭಾಷೆಯ ಬಗ್ಗೆ ನಾಡು ನುಡಿ ಮತ್ತು ಇತಿಹಾಸವನ್ನು ಇಂದು ಪೋಷಕರು ಮಕ್ಕಳಿಗೆ ಹೇಳಿಕೊಡಬೇಕು ಎಂದರು.
ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಜಿಲ್ಲಾಧ್ಯಕ್ಷರಾದ ಮಾಲತೇಶ್ ಅರಸ್ ಮಾತನಾಡಿ, ಮಕ್ಕಳಲ್ಲಿ ಮಾನವನ ವ್ಯಕ್ತಿತ್ವದ ರೂಪುರೇಖೆಯು ಬಾಲ್ಯದಿಂದ ಅವನ ಸುತ್ತಮುತ್ತಲಿರುವ ಶಿಕ್ಷಕರ, ಪಾಲಕರ ಹಾಗೂ ಸಮಾಜದ ಜನರ ಪ್ರಭಾವದಿಂದ ಆಗಿರುತ್ತದೆ. ಬರೀ ಶಿಕ್ಷಣವೊಂದೇ ಸಿಕ್ಕರೆ ಸಾಲದು. ಅದರ ಜೊತೆ ಇನ್ನು ಅನೇಕ ಅಂಶಗಳನ್ನು ಬಾಲ್ಯದಿಂದ ರೂಢಿಸಿಕೊಂಡರೆ ಯಶಸ್ವಿ ವ್ಯಕ್ತಿಯಾಗುತ್ತಾನೆ. ಶಿಕ್ಷಕರು ಮಕ್ಕಳ ಅವಶ್ಯಕತೆಗೆ ತಕ್ಕಂತೆ ಚಟುವಟಿಕೆಗಳ ಮೂಲಕ ನಲಿಯುತ್ತಾ ಶಿಕ್ಷಣವನ್ನು ನೀಡುವ ಪದ್ಧತಿ. ಪ್ರತಿ ಮಗುವೂ ಬೆರೆಯವರನ್ನು ಅನುಸರಿಸದೆ, ಸ್ವಂತದ ಸಾಮರ್ಥ್ಯಗಳನ್ನು ಹೊಂದಿರುತ್ತದೆ. ಅವುಗಳನ್ನು ಗುರುತಿಸಿ, ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡುವುದು ಶಿಕ್ಷಕರ ಕರ್ತವ್ಯ ಎಂದರು.
ತಾಯಿಯು ಮಗುವಿನ ಜೀವನದ ಪ್ರಮುಖ ಅಂಶ, ಅಲ್ಲಿ ಒಂದು ಮಗು ತನ್ನ ಗರ್ಭದಿಂದ ಮತ್ತು ಹುಟ್ಟಿದ ಕ್ಷಣದಿಂದ ಬೆಳೆದು ಸಮಾಜಕ್ಕೆ ಕಳುಹಿಸುವವರೆಗೆ ಅವಳ ಸುತ್ತಲೂ ಬೆಳೆಯುತ್ತದೆ. ತಾಯಂದಿರು ನಿಸ್ವಾರ್ಥ ಮತ್ತು ಶಕ್ತಿಶಾಲಿ. ತಮ್ಮ ಮಗುವಿನ ಬೆಳವಣಿಗೆಗಾಗಿ ಎಲ್ಲಾ ತೊಂದರೆಗಳನ್ನು ಅನುಭವಿಸುವ ಮಾನಸಿಕ ಶಕ್ತಿ ತಾಯಿಗಿದೆ, ಜ್ಞಾನ ಕುಟೀರ ವಾತಾವರಣ ಒಂದು ತಾಯಿ ಮನೆಯಂತೆ ಇದೆ. ಎಂದರು.
ನೀಲಾಚಲ ನಿಸರ್ಗಧಾಮದ ಎಸ್ ಎಸ್ ವೈ ಆಶ್ರಮದ ಚಂದ್ರಶೇಖರ ಮೇಟಿ ಗುರೂಜಿ ಮಾತನಾಡಿ, ಮಕ್ಕಳಲ್ಲಿ ಇರುವ ಸುಪ್ತ ಪ್ರತಿಭೆಯನ್ನು ಹೊರತರಿಸುವ ಕೆಲಸ ಆಗಬೇಕಿದೆ. ಇಲ್ಲಿ ನಾವು ಅದನ್ನು ಕಂಡೆವು. ಪೋಷಕರ ಉತ್ಸಾಹ ಉಲ್ಲಾಸ ಇದೆ, ಬ್ರಹ್ಮಶ್ರೀ ಪ್ರಶಸ್ತಿ ಪಡೆದದ್ದು ನಮ್ಮ ಪುಣ್ಯ ಎಂದರು.
ಐವರು ಸಾಧಕರಿಗೆ “ಬ್ರಹ್ಮಶ್ರೀ ಪ್ರಶಸ್ತಿ” :
ತತ್ವಜ್ಞಾನಿ, ಅಧ್ಯಾತ್ಮಿಕ ಚಿಂತಕ, ಸಮಾಜ ಸುಧಾರಕರಾದ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಯೋಗ ಸಾಧಕರಾದ ಚಂದ್ರಶೇಖರ ಮೇಟಿ ಗುರೂಜಿ, ಈಡಿಗ ಸಮಾಜದ ಜಿಲ್ಲಾಧ್ಯಕ್ಷ, ಸಮಾಜಸೇವಕ ಹೆಚ್.ಜೀವನ್, ರೈತ ಸಂಘದ ಜಿಲ್ಲಾಧ್ಯಕ್ಷರಾದ ಇ.ಎನ್ ಲಕ್ಷ್ಮೀಕಾಂತ್, ಸಾಮಾಜಿಕ ಹೋರಾಟಗಾರರೂ ವಕೀಲರಾದ ಮಾಲತೇಶ್ ಅರಸ್, ಚಿತ್ರಕಲಾವಿದ ಡಿ. ನಾಗರಾಜ್ ಇವರಿಗೆ “ಬ್ರಹ್ಮಶ್ರೀ ಪ್ರಶಸ್ತಿ” ಯನ್ನು ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಗಳು
ಪ್ರದಾನ ಮಾಡಿದರು. ಬ್ರಹ್ಮಶ್ರೀ ಜ್ಞಾನಕುಟೀರ ಸಂಸ್ಥಾನ ಸಂಸ್ಥೆಯ ಅಧ್ಯಕ್ಷರಾದ. ಎಂ.ವಿಜಯ ಲಕ್ಷ್ಮಿ ಕಾರ್ಯದರ್ಶಿ ಎಸ್.ರಾಘವೇಂದ್ರ, ಉಪಾಧ್ಯಕ್ಷ ರಾಜೇಶ್ ಅಪೂರ್ವ, ಕಲಾವಿದ ಎಂ.ಕೆ ಹರೀಶ್ , ಎಸ್ ಗುರುರಾಜ್ (ಕೊಳಲು), ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಕುಮಾರ್, ಸುರೇಂದ್ರ,ಆಶಾ ಜಗನ್ನಾಥ, ಸಮರ್ಥ್ ದೇವರು ಜೋಗಿಮಟ್ಟಿ ಗೆಳೆಯರ ಬಳಗದ ರವಿಕುಮಾರ್, ಇನ್ನೂ ಅನೇಕ ಮುಖಂಡರು, ಪೋಷಕರು ಇದ್ದರು.